ರಾಜ್ಯ

ಕೋವಿಡ್-19: ಕರ್ನಾಟಕದಲ್ಲಿ ಆಮ್ಲಜನಕ ಕೊರತೆ; ಪ್ರಧಾನಿ ಮೋದಿಗೆ ಪತ್ರ ಬರೆದ ಹೆಚ್ ಡಿಕೆ

Srinivasamurthy VN

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕು ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿರುವ ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿದ್ದು, ಈ ಸಂಬಂಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಕರ್ನಾಟಕದ ಆಕ್ಸಿಜನ್ ಕೊರತೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿರುವ ಕುಮಾರಸ್ವಾಮಿ ಅವರು, 'ಆಮ್ಲಜನಕದ ಕೊರತೆಯಿಂದಾಗಿ ನಿನ್ನೆ (ಮೇ 03) ಚಾಮರಾಜನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 24 ಜನರ ಸಾವಿನ ಬಗ್ಗೆ ನಿಮಗೆ ಈಗಾಗಲೇ ತಿಳಿಸಲಾಗಿದೆ. ಅಂತೆಯೇ  ಇಂದು ಬೆಳಿಗ್ಗೆ, ಗುಲ್ಬರ್ಗಾ ಜಿಲ್ಲೆಯ ಆಸ್ಪತ್ರೆಯಿಂದ ಇದೇ ರೀತಿಯ ಕೊರತೆಯಿಂದಾಗಿ ಇನ್ನೂ ನಾಲ್ಕು ಸಾವುಗಳು ವರದಿಯಾಗಿವೆ. ಈ ಎರಡೂ ಜಿಲ್ಲೆಗಳು ಮಾತ್ರವಲ್ಲ ರಾಜ್ಯದ ಸಾಕಷ್ಟು ಜಿಲ್ಲೆಗಳಲ್ಲಿ ಇಂತಹುದೇ ಆತಂಕವಿದೆ. ಬೆಂಗಳೂರು ನಗರದ ಕೆಲ ಆಸ್ಪತ್ರೆಗಳು ಇಂದು  ಬೆಳಗ್ಗೆಯಿಂದಲೇ ಆಕ್ಸಿಜನ್ ಕೊರತೆ ಕುರಿತು ತಮ್ಮ ಅಳಲು ತೋಡಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಅಂತೆಯೇ ಇದೇ ವಿಚಾರವಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದು, ಕರ್ನಾಟಕವು ಉತ್ಪಾದಿಸುವ ಆಮ್ಲಜನಕವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅವಕಾಶ ನೀಡಿದರೆ ಯಾವುದೇ ಕೊರತೆ ಇರುವುದಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಕೊರತೆಯ ಮೇಲೆ ಯಾವುದೇ ನಿಖರವಾದ ಚಿತ್ರಣ ಸಿಕ್ಕಿಲ್ಲ. ಇದನ್ನು ತ್ವರಿತವಾಗಿ ನಿಭಾಯಿಸಬೇಕಾಗಿದೆ, ಆದ್ದರಿಂದ ನಾನು ನಿಮ್ಮ ತುರ್ತು ಹಸ್ತಕ್ಷೇಪವನ್ನು ಬಯಸುತ್ತೇನೆ. ಅಂದಾಜಿನ ಪ್ರಕಾರ, ಮೈಸೂರು ಮತ್ತು ಚಾಮರಾಜನಗರಕ್ಕೆ ದಿನಕ್ಕೆ 70 ಟನ್ ಆಮ್ಲಜನಕ ಬೇಕಾಗುತ್ತದೆ. ಆದರೆ, ಅವರು ಪ್ರತಿದಿನ ಸರಾಸರಿ 20 ಟನ್ ಆಮ್ಲಜನಕ ಬಳಕೆ ಮಾಡಲು ಸಾಧ್ಯವಾಗುತ್ತಿದೆ. ಇದು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕೊರತೆಯ ಬಗ್ಗೆ ನಿಮಗೆ ಸರಿಯಾದ ಕಲ್ಪನೆಯನ್ನು ನೀಡುತ್ತದೆ ಎಂದು ಭಾವಿಸಿದ್ದೇನೆ.

ನಾನು ರಾಜ್ಯಾದ್ಯಂತ ಮಾಹಿತಿ ಸಂಗ್ರಹಿಸಿದ್ದು, ತುಮಕೂರು, ಬೆಳಗಾವಿ, ಧಾರವಾಡ ಮತ್ತು ಹಾಸನದ ಜಿಲ್ಲೆಗಳಲ್ಲಿನ ಆಕ್ಸಿಜನ್ ಸರಬರಾಜು ಪ್ರಮಾಣ ಕಡಿಮೆ ಇದೆ. ಇದು ಆತಂಕಕ್ಕೆ ಕಾರಣವಾಗಿದ್ದು, ವೇಗವಾಗಿ ವಿಸ್ತರಿಸುತ್ತಿರುವ ಬಿಕ್ಕಟ್ಟಿನ ಸೂಚಕವಾಗಿದೆ. ಒಂದು ವೇಳೆ ರಾಜ್ಯ ಆಡಳಿತವು ಚುರುಕಾಗಿ  ಕಾರ್ಯನಿರ್ವಹಿಸದಿದ್ದರೆ, ಮತ್ತು ಅದನ್ನು ಕೇಂದ್ರವು ಬೆಂಬಲಿಸದಿದ್ದರೆ, ಹೆಚ್ಚಿನ ದುರಂತಕ್ಕೆ ತೆರೆದುಕೊಳ್ಳುವ ಸಾಧ್ಯತೆಯಿದೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

SCROLL FOR NEXT