ರಾಜ್ಯ

ಕೋವಿಡ್-19: ಹುಬ್ಬಳ್ಳಿ-ಧಾರವಾಡದಲ್ಲಿ 2 ವಾರದಲ್ಲಿ 66 ಮಂದಿ ಪೊಲೀಸರಿಗೆ ಕೊರೋನಾ ಸೋಂಕು!

Srinivasamurthy VN

ಧಾರವಾಡ: ಹುಬ್ಬಳ್ಳಿ-ಧಾರವಾಡದಲ್ಲಿ ಕೇವಲ 2 ವಾರದ ಅವಧಿಯಲ್ಲಿ 66 ಮಂದಿ ಪೊಲೀಸರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು..ಕಳೆದ ಎರಡು ವಾರಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ 66 ಪೊಲೀಸರು ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಬಹುತೇಕ ಸೋಂಕಿತ ಪೊಲೀಸರು ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಬಹುತೇಕ ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಅನೇಕ ಪೊಲೀಸರು ತಮ್ಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಅವರಿಗೆ ಸೋಂಕು ತಗಲಿರುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ  ಕಚೇರಿಯಲ್ಲಿರುವ 2,000 ಪೊಲೀಸ್ ಸಿಬ್ಬಂದಿಗಳಿಗೆ ಲಸಿಕೆ ಅಭಿಯಾನ ಆರಂಭವಾಗಿದ್ದು, ಬಹುತೇಕ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಮೂಲಗಳು ವಿವಿಧ ಆರೋಗ್ಯ ಸಮಸ್ಯೆಗಳಿಂದಾಗಿ ಬಳಲುತ್ತಿರುವ ಸುಮಾರು 60 ಪೊಲೀಸರಿಗೆ ಮಾತ್ರ ಲಸಿಕೆ ನೀಡಿಲ್ಲ. ಉಳಿದಂತೆ  ಬಹುತೇಕ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗಿದೆ. 

ಬಹುತೇಕ ಸಿಬ್ಬಂದಿಗೆ ಮನೆಯಲ್ಲೇ ಚಿಕಿತ್ಸೆ
ಸುಮಾರು 60ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಮೂವರು ಪೊಲೀಸರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇಬ್ಬರು ಕೋವಿಡ್ ಆರೈಕೆ ಕೇಂದ್ರಗಳಲ್ಲಿದ್ದಾರೆ. ಉಳಿದ 57 ಮಂದಿ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ನಾಲ್ವರು ಸೋಂಕಿನಿಂದ  ಚೇತರಿಸಿಕೊಂಡ ನಂತರ ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂತೆಯೇ ಮತ್ತಷ್ಟು ಸೋಂಕು ಹರಡುವಿಕೆಯನ್ನು ತಡೆಗಟ್ಟಲು ನಿರಂತರ ಮೇಲ್ವಿಚಾರಣೆ, ಪೊಲೀಸ್ ಠಾಣೆ ಆವರಣದ ನೈರ್ಮಲ್ಯ ಮತ್ತು ಇತರೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು  ತಿಳಿಸಿದ್ದಾರೆ. 

ಠಾಣೆಗಳಲ್ಲಿ ಮತ್ತು ಇತರೆ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಪೊಲೀಸರಿಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ, ಸ್ಯಾನಿಟೈಸರ್ ಬಳಕೆಯನ್ನೂ ಕೂಡ ಕಡ್ಡಾಯ ಮಾಡಲಾಗಿದೆ. ಠಾಣೆಗಳ ಹೊರಗೆ ಸಿಬ್ಬಂದಿಗಳನ್ನು ನಿಯೋಜಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗುತ್ತಿದೆ. ಇದರಿಂದ ಠಾಣೆಯ  ಒಳಗೆ ಜನಸಂಪರ್ಕ ತಡೆಯಲಾಗುತ್ತಿದೆ. ಕೋವಿಡ್ ಪ್ರೋಟೋಕಾಲ್ ಮತ್ತು ಜಾಗೃತಿ ಕುರಿತು ಸಿಬ್ಬಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಆದಾಗ್ಯೂ ಕಳೆದ ಎರಡು ವಾರಗಳಲ್ಲಿ ಹಲವು ಸಿಬ್ಬಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭು ರಾಮ್ ಹೇಳಿದ್ದಾರೆ.

SCROLL FOR NEXT