ರಾಜ್ಯ

ಚಾಮರಾಜನಗರ ದುರಂತ: ಮೈಸೂರು ಡಿಸಿ ವಿರುದ್ಧ ಹರಿಹಾಯ್ದ ಸಾರಾ ಮಹೇಶ್

Manjula VN

ಮೈಸೂರು: ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ಮಂಗಳವಾರ ಹರಿಹಾಯ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕ್ಸಿಜನ್ ದುರಂತದಲ್ಲಿ 24ಜನರ ಸಾವಿಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಡಳಿತವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. 

ಚಾಮರಾಜನಗರ- ಮೈಸೂರು ಜಿಲ್ಲಾಡಳಿತಗಳ ವ್ಯತ್ಯಾಸದಿಂದ ಈ ದುರ್ಘಟನೆ ನಡೆದಿದೆ. ಮೈಸೂರಿನಿಂದ ಸಕಾಲಕ್ಕೆ ಸಿಲಿಂಡರ್ ಪೂರೈಕೆ ಆಗಿಲ್ಲ. ಸದರನ್ ಗ್ಯಾಸ್‍ನಿಂದ 2.30ಕ್ಕೆ 90 ಸಿಲಿಂಡರ್ ಹೋಗಿದೆ. ಆದರೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿರುವಂತೆ 220 ಆಮ್ಲಜನಕ ಸಿಲಿಂಡರ್ ಪೂರೈಕೆ ಆಗಿಲ್ಲ ಎಂದಿದ್ದಾರೆ. ಕಾಂಟ್ರ್ಯಾಕ್ಟ್ ಇರುವುದು ಚಾಮರಾಜನಗರ ಜಿಲ್ಲಾಸ್ಪತ್ರೆ, ಸದರನ್ ಮತ್ತು ಪದಕಿ ಗ್ಯಾಸ್ ಏಜೆನ್ಸಿಗಳ ನಡುವೆ. ಕಳುಹಿಸಿಕೊಡಲು ನೀವು ಯಾರು? 220 ಕಳುಹಿಸಿದ್ದೇವೆ ಅಂದರೆ ನಿಮ್ಮ ಕಂಟ್ರೋಲ್ ಇರುವುದನ್ನು ಒಪ್ಪಿಕೊಂಡಂತಾಯಿತು ಎಂದು ಆರೋಪಿಸಿದರು.

ಪ್ರತಿ ದಿನ 300-350 ಸಿಲಿಂಡರ್ ನೀಡುವಂತೆ ಆಕ್ಸಿಜನ್ ಸಿಲಿಂಡರ್ ಕಂಪನಿಗಳ ಜೊತೆ ಕಾಂಟ್ರ್ಯಾಕ್ಟ್ ಮಾಡಿಕೊಂಡಿರುತ್ತದೆ. ಆದರೆ ಈಗ ಒಂದು ವಾರದ ಹಿಂದೆ ಮೈಸೂರು ಜಿಲ್ಲಾಡಳಿತದಿಂದ ಸಭೆ ಮಾಡಿ, ಅಲ್ಲಿನ ಡ್ರಗ್ ಕಂಟ್ರೋಲರ್‍ಗೆ ಸೂಚಿಸಿ, ಚಾಮರಾಜನಗರಕ್ಕೆ 150, ಮಂಡ್ಯ 100 ಸಿಲಿಂಡರ್ ನೀಡುವಂತೆ ತಿಳಿಸುತ್ತಾರೆ. ಅಲ್ಲದೆ ಆಕ್ಸಿಜನ್‍ಗಾಗಿ ಚಾಮರಾಜನಗರದ ವಾಹನ ಬಂದು ನಿಂತರೂ ದಿನಕ್ಕೆ 20, 30, 40 ಹೀಗೆ ಮೂರ್ನಾಲ್ಕು ಬಾರಿ ಅವರು ಬರಬೇಕಿದೆ.

ನಿಮ್ಮ ಭೂ ವ್ಯವಹಾರಗಳಿದ್ದರೆ ಮಾಡಿಸಿಕೊಳ್ಳಿ. ಆದರೆ ಮೈಸೂರಿನಂತಹ ಪ್ರಮುಖ ಜಿಲ್ಲೆಗೆ ಪ್ರಾಮಾಣಿಕ, ಹಿರಿಯ ಅಧಿಕಾರಿಯನ್ನು ನೇಮಿಸಿ. ನಿನ್ನೆ ಚಾಮರಾಜನಗರದಲ್ಲಿ ದುರಂತ ಉಂಟಾಗಿದೆ. ಮೈಸೂರಿನಲ್ಲೂ ಅಧ್ವಾನಗಳು ಶುರು ಆಗಿವೆ. ದಯವಿಟ್ಟು ಕೋವಿಡ್ ನಿರ್ವಹಣೆವಾಗಿ ಬೇರೊಬ್ಬ ಅಧಿಕಾರಿಯನ್ನು ನೇಮಿಸಿ ಎಂದು ಮನವಿ ಮಾಡಿದ್ದಾರೆ.

SCROLL FOR NEXT