ರಾಜ್ಯ

ರಾಜ್ಯದಲ್ಲಿ ಆಕ್ಸಿಜನ್ ಕೊರತೆ: ಕೇಂದ್ರಕ್ಕೆ ಗಡುವು ನೀಡಿದ ಹೈಕೋರ್ಟ್

Manjula VN

ಬೆಂಗಳೂರು: ಆಕ್ಸಿಜನ್ ಕೊರತೆ ಎದುರಾಗಿ ಜನರು ಸಾಯುತ್ತಿದ್ದರೂ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆಯ ಪ್ರಮಾಣ ಹೆಚ್ಚಿಸದ ಕೇಂದ್ರ ಸರ್ಕಾರವನ್ನು ಹೈಕೋರ್ಟ್ ಮಂಗಳವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. 

ಅಲ್ಲದೆ, ರಾಜ್ಯದ ಆಕ್ಸಿಜನ್ ಬಳಕೆಗೆ ವಿಧಿಸಿರುವ ಮಿತಿ ಮತ್ತು ಪೂರೈಕೆಯ ಪ್ರಮಾಣ ಹೆಚ್ಚಿಸುವ ಕುರಿತು ಬುಧವಾರ ಬೆಳಿಗ್ಗೆ 10 ಗಂಟೆಯೊಳಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡು ತಿಳಿಸದಿದ್ದರೆ ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಲಿಗೆ ಎಂದೂ ಎಚ್ಚರಿಸಿದೆ. 

ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಜನ ಸಾಯುತ್ತಿದ್ದರೂ ಇನ್ನೂ ಯಾವಾಗ ಆಕ್ಸಿಜನ್ ಪ್ರಮಾಣ ಹೆಚ್ಚಿಸುತ್ತೀರಿ? ಇನ್ನೆಷ್ಟು ಜನ ಸಾಯಬೇಕು? ನೀವು ನಿರ್ಧಾರ ತೆಗೆದುಕೊಳ್ಳುವವರೆಗೆ ಕಾಯುತ್ತಾ ಕೂರಬೇಕೆ? ಎಂದು ಕಟುವಾಗಿ ಪ್ರಶ್ನಿಸಿದ ನ್ಯಾಯಪೀಠ, ದೇಶದ ಇತರೆ ರಾಜ್ಯಗಳಲ್ಲಿ ದಾಖಲಾಗಿರುವ ಕೋವಿಡ್ ಪ್ರಕರಣಗಳು ಹಾಗೂ ರಾಜ್ಯವಾರು ಆಕ್ಸಿಜನ್ ಪೂರೈಕೆ ವಿವರ ಒದಗಿಸುವಂತೆ ತಾಕೀತು ಮಾಡಿದೆ. 

ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮೇ.5ರವರೆಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಅಂದಾಜಿನ ಮೇಲೆ ಪ್ರತಿ ದಿನ 1,792 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಆಸ್ಪತ್ರೆಗಳಿಗೆ ಸರ್ಕಾರದ ವತಿಯಿಂದಲೇ ಆಮ್ಲಜನಕ ಪೂರೈಸಲಾಗುತ್ತಿದೆ ಎಂದು ತಿಳಿಸಿದರು. 

ಕೇಂದ್ರದ ಪರ ವಕೀಲರು, ಕರ್ನಾಟಕಕ್ಕೆ ಈ ಮೊದಲು 802 ಮೆಟ್ರಿಕ್ ಟನ್ ಆಕ್ಸಿಜನ್ ಬಳಕೆಗೆ ಮಿತಿ ನಿಗದಿಪಡಿಸಲಾಗಿತ್ತು. ಆ ಮಿತಿಯನ್ನು 865 ಮೆಟ್ರಿಕ್ ಟನ್'ಗೆ ಹೆಚ್ಚಳ ಮಾಡಲಾಗಿದೆ ಎಂದರು. 

ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ರಾಜ್ಯಕ್ಕೆ ಪ್ರತಿದಿನ ಕನಿಷ್ಠ 1,162 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿದೆ ಎಂದು ಏ.30 ರಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರ ಮಾತ್ರ 865 ಮೆಟ್ರಿಕ್ ಟನ್'ಗೆ ಹೆಚ್ಚಿಸಿದೆ. ಇಷ್ಟು ಮಾತ್ರ ಹೆಚ್ಚಳ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದಿತು. 

SCROLL FOR NEXT