ರಾಜ್ಯ

ಕೊರೋನಾ ಕರ್ಫ್ಯೂ ವಿಸ್ತರಣೆ ಬಗ್ಗೆ ಮೇ 10ಕ್ಕೆ ನಿರ್ಧಾರ: ಸಿಎಂ ಯಡಿಯೂರಪ್ಪ

Raghavendra Adiga

ಬೆಂಗಳೂರು: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮತ್ತು ಕರ್ನಾಟಕದ ಆರು ಕ್ಕೂ ಹೆಚ್ಚು ಜಿಲ್ಲೆಗಳು ಪ್ರತಿದಿನ 1,000 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡುತ್ತಿರುವುದರಿಂದ, ಈಗಿರುವ ಕರೋನಾ ಕರ್ಫ್ಯೂ ವಿಸ್ತರಣೆ ಸಾಧ್ಯತೆ ಬಹಳವೇ ಇದೆ ಎನ್ನಲಾಗಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಯಥಾಸ್ಥಿತಿಯೇ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈಗಿರುವ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆಗಳು ಅಥವಾ ಲಾಕ್ ಡೌನ್ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಬಂದ ಬಳಿಕವಷ್ಟೇ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಬುಧವಾರ ಸಂಜೆ ಯಡಿಯೂರಪ್ಪ ಅವರು ಸಚಿವರೊಂದಿಗೆ ಆಯಾ ಜಿಲ್ಲೆಗಳಲ್ಲಿನ ಪರಿಸ್ಥಿತಿ, ಆಮ್ಲಜನಕ, ಔಷಧಿಗಳು ಮತ್ತು ಬೆಡ್ ಲಭ್ಯತೆಗೆ ಸಂಬಂಧಿಸಿದಂತೆ ಸಭೆ ನಡೆಸಿದರು.

“ನಾವು ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರವನ್ನು ಕಾರ್ಯಗತಗೊಳಿಸಬೇಕು. ನಾವು ಅವರ ನಿರ್ದೇಶನಗಳಿಗಾಗಿ ಕಾಯುತ್ತಿದ್ದೇವೆ. ಅದರ ಆಧಾರದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಯಡಿಯೂರಪ್ಪ ಹೇಳಿದರು. ಸಂಪೂರ್ಣ ಲಾಕ್ ಡೌನ್ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಡೆಸಿದ ಅವಲೋಕನದ ಆಧಾರದ ಮೇಲೆ ಪ್ರಧಾನಮಂತ್ರಿಗಳ ನಿರ್ಧಾರವು ಕರ್ನಾಟಕದ ಮೇಲೆಯೂ ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದರು.

ಯಡಿಯೂರಪ್ಪ ಸಂಪೂರ್ಣ ಲಾಕ್‌ಡೌನ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲವಾದರೂ, ಪ್ರಕರಣಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯವು ಕೇಂದ್ರದಿಂದ ಇಂತಹ ಪ್ರಕಟಣೆಯನ್ನು ನಿರೀಕ್ಷಿಸುತ್ತದೆ ಎಂದು ಸರ್ಕಾರದ ಮೂಲಗಳು ಸೂಚಿಸುತ್ತವೆ. ಒಂದು ವೇಳೆ ಅಂತಹ ಪ್ರಕಟಣೆ ಬಾರದೆ ಹೋದಲ್ಲಿ ಕರ್ನಾಟಕವು ಮೇ 10 ರ ನಂತರ ಅಸ್ತಿತ್ವದಲ್ಲಿರುವ ಕರ್ಫ್ಯೂ ವಿಸ್ತರಣೆಗೆ  ಅಥವಾ ಹೆಚ್ಚಿನ ನಿರ್ಬಂಧಗಳ ಹೇರಿಕೆ ಬಗ್ಗೆ ತೀರ್ಮಾನಿಸಲಿದೆ. ಪ್ರಸ್ತುತ ರಾಜ್ಯದಲ್ಲಿ ಮೇ 12 ರವರೆಗೆ ಕೊರೋನಾ ಕರ್ಪ್ಯೂ ಜಾರಿಯಲ್ಲಿರಲಿದೆ. ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ನೆಲೆಸಿ ಸಿಎಂಗೆ ದೈನಂದಿನ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಲಿದ್ದಾರೆ.

SCROLL FOR NEXT