ರಾಜ್ಯ

ಬೆಡ್ ಕೊರತೆ ಸಮಸ್ಯೆ ನೀಗಿಸಲು ಬೆಂಗಳೂರಿನ ರೋಗಿಗಳನ್ನು ಹತ್ತಿರದ ಜಿಲ್ಲೆಗಳಿಗೆ ವರ್ಗಾಯಿಸಿ: ತಜ್ಞರ ಅಭಿಮತ 

Sumana Upadhyaya

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಕೊರೋನಾ ಸೋಂಕಿನ ಎರಡನೇ ಅಲೆಯಿಂದ ನಗರದ ಜನತೆ ತತ್ತರಿಸಿ ಹೋಗಿದ್ದು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್, ಐಸಿಯು ಕೊರತೆಯುಂಟಾಗಿದೆ.

ಕೋವಿಡ್ ವಾರ್ ರೂಂ ಮತ್ತು ತಜ್ಞರು, ವೈದ್ಯರು ಹೇಳುವ ಪ್ರಕಾರ ಇದಕ್ಕೆ ತಕ್ಷಣದ ಪರಿಹಾರವೆಂದರೆ ನಗರದ ಆಸ್ಪತ್ರೆಗಳಿಂದ ಕೆಲವು ರೋಗಿಗಳನ್ನು ಪಕ್ಕದ ಜಿಲ್ಲೆಗಳಿಗೆ ವರ್ಗಾಯಿಸುವುದು. ನೆರೆಯ ಜಿಲ್ಲೆಗಳಲ್ಲಿ ಐಸಿಯು, ಆಕ್ಸಿಜನ್ ಭರಿತ ಬೆಡ್ ಗಳು ಮತ್ತು ವೆಂಟಿಲೇಟರ್ ಸಮಸ್ಯೆ ಅಷ್ಟೊಂದು ಇಲ್ಲ, ಸ್ವಲ್ಪ ಕಡಿಮೆಯಾಗಿದೆ.

ರಾಜ್ಯ ಕೋವಿಡ್ ವಾರ್ ರೂಂ ಪೋರ್ಟಲ್ ನ್ನು ಸರ್ಕಾರ ಜಿಲ್ಲೆಗಳ ಜೊತೆ ಸಂಪರ್ಕಿಸಿ ಬೇರೆ ಜಿಲ್ಲೆಗಳಲ್ಲಿ ಎಷ್ಟು ಬೆಡ್ ಗಳ ಲಭ್ಯತೆ ಇದೆ ಎಂದು ನೋಡಿಕೊಳ್ಳಲು ಏಕರೂಪ ಪೋರ್ಟಲ್ ನ್ನು ರಚಿಸಬೇಕು. ಬೆಂಗಳೂರಿನಲ್ಲಿ ಬೆಡ್ ಸಿಗದಿದ್ದರೆ ವಾರ್ ರೂಂ, ಸಹಾಯವಾಣಿ 1912, 108ಗಳ ಮೂಲಕ ಹತ್ತಿರದ ಜಿಲ್ಲೆಗಳಾದ ಕೋಲಾರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸೌಲಭ್ಯವನ್ನು ಹುಡುಕಬೇಕು, ಅಲ್ಲಿ ಬೆಡ್ ಇದೆ ಎಂದು ಗೊತ್ತಾದ ಕೂಡಲೇ ಗ್ರೀನ್ ಕಾರಿಡಾರ್ ಮೂಲಕ ರೋಗಿಗಗಳನ್ನು ವರ್ಗಾಯಿಸಬೇಕು.

ಗಂಭೀರ ಅನಾರೋಗ್ಯ ಸ್ಥಿತಿಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ಕರೆತಂದಾಗ ತಕ್ಷಣವೇ ಬೆಡ್ ವ್ಯವಸ್ಥೆಯಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಬೆಡ್ ಸಿಗದಿದ್ದರೆ ಬೇರೆ ಹತ್ತಿರದ ಜಿಲ್ಲೆಗೆ ವರ್ಗಾಯಿಸಿದರೆ ಒಳ್ಳೆಯದಲ್ಲವೇ ಎಂದು ಕೋವಿಡ್ ಕರ್ತವ್ಯದಲ್ಲಿರುವ ಹಿರಿಯ ಆಡಳಿತಾಧಿಕಾರಿಯೊಬ್ಬರು ಹೇಳುತ್ತಾರೆ.

ಬೆಂಗಳೂರಿನ ಅನೇಕ ನಿವಾಸಿಗಳು ತಮ್ಮ ಕುಟುಂಬಸ್ಥರಿಗೆ ಕೋವಿಡ್ ಬಂದಾಗ ಉಡುಪಿ, ಮಂಗಳೂರು, ಕೇರಳಕ್ಕೆ ಆಸ್ಪತ್ರೆಗಳಿಗೆ ಕುಟುಂಬದವರು ಕರೆದುಕೊಂಡು ಹೋಗುತ್ತಿದ್ದಾರೆ. ಅವರದ್ದೇ ಸ್ವಂತ ವಾಹನದಲ್ಲಿ ಕರೆದುಕೊಂಡು ಹೋಗುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.ಅದರ ಬದಲು ಸರ್ಕಾರವೇ ಹತ್ತಿರದ ಜಿಲ್ಲೆಗಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಉತ್ತಮವಲ್ಲವೇ ಎಂದು ಅವರು ಕೇಳುತ್ತಾರೆ.

ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆಯಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಉಚಿತ ಚಿಕಿತ್ಸೆ ಮೇಲೆ ಜನರಿಗೆ ನಂಬಿಕೆ ಬರುತ್ತಿಲ್ಲ, ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡ ಉತ್ತಮ ಚಿಕಿತ್ಸೆ ನೀಡುತ್ತಾರೆ. ಬೇರೆ ಜಿಲ್ಲೆಗಳಲ್ಲಿ ಬೆಂಗಳೂರಿಗೆ ಹೋಲಿಸಿದರೆ ಕೊರೋನಾ ಸೋಂಕಿನ ಪ್ರಕರಣ ಕಡಿಮೆಯಿರುವುದರಿಂದ ಅಲ್ಲಿ ಆಕ್ಸಿಜನ್, ಐಸಿಯು ಬೆಡ್, ವೆಂಟಿಲೇಟರ್ ಗಳ ಸಮಸ್ಯೆ ಅಷ್ಟೊಂದು ಇಲ್ಲ.

SCROLL FOR NEXT