ರಾಜ್ಯ

ಕೋವಿಡ್-19 ಸಂಕಷ್ಟ: ತಮ್ಮ ಕ್ಷೇತ್ರದ ರೋಗಿಗಳಿಗಾಗಿ ಮತ್ತೆ ವೈಟ್ ಕೋಟ್ ಧರಿಸಿ 'ಫೀಲ್ಡ್ ' ಗಿಳಿದ ಶಾಸಕರು!

Shilpa D

ಬೆಂಗಳೂರು: ಆಕ್ಸಿಜನ್ ಕೊರತೆ, ಬೆಡ್‌ ಕೊರತೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ರಾಜ್ಯಾದ್ಯಂತ ಕೋವಿಡ್‌ ಸೋಂಕಿತರಿಗೆ ಬೆಡ್‌ಗಳ ಕೊರತೆ ಎದುರಾಗಿದೆ. ತುಮಕೂರು ಜಿಲ್ಲೆಯಲ್ಲೂ ಈ ಸಮಸ್ಯೆ ತಲೆದೋರಿದೆ. ಮತ್ತೊಂದು ಕಡೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಉಂಟಾಗಿದೆ. ಆಕ್ಸಿಜನ್ ಕೊರತೆ ಬೆಡ್‌ಗಳ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಿ ಎಂಬುವುದು ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಆಗ್ರಹವಾಗಿದೆ.

ಕುಣಿಗಲ್ ಜನರಲ್ ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್ ಗಳಿದ್ದು ಕೆಲವೇ ಕೆಲವು ಸಿಬ್ಬಂದಿಯಿದ್ದಾರೆ. ಹೀಗಾಗಿ ಶಾಸಕ ಡಾ.ರಂಗನಾಥ್ ತಾವೇ ಖುದ್ದಾಗಿ ಐಸಿಯು ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 

ಬೆಂಗಳೂರಿನಿಂದ ಪ್ರತಿದಿನ 1 ಗಂಟೆ ಪ್ರಯಾಣ ಮಾಡಿ ಕುಣಿಗಲ್ ಗೆ ತೆರಳಿ ಸರ್ಕಾರಿ ಆಸ್ಪತ್ರೆಯ ಕೋವಿಡ್ ರೋಗಿಗಳ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ, 100 ರೋಗಿಗಳು ಆಕ್ಸಿಜನ್ ರಹಿತ ಬೆಡ್ ಗಳಲ್ಲಿ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ.

ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ, ಆದರೆ ಮೂಲಭೂತ ಸೌಕರ್ಯ ಕಡಿಮೆಯಿದೆ, ನನ್ನ ರೋಗಿಗಳ ಜೀವ ಉಳಿಸಲು ಪ್ರತಿದಿನ ರೆಮ್ಡಿಸಿವಿರ್ ಗಾಗಿ ಜಿಲ್ಲಾಡಳಿತದ ಜೊತೆ ಅಕ್ಷರಶಃ ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಪುತ್ರ ಶಾಸಕ ಡಾ.ಅಜಯ್ ಸಿಂಗ್ ತಮ್ಮ ಸ್ವಕ್ಷೇತ್ರ ಕಲಬುರಗಿಯ ಜೇವರ್ಗಿಯಲ್ಲಿ 10 ಹಾಸಿಗೆಯ ಬೆಡ್ ವ್ಯವಸ್ಥೆ ಮಾಡಿದ್ದಾರೆ, ಜೇವರ್ಗಿಯ ಹಲವು ರೋಗಿಗಳಿಗೆ ಬೆಡ್, ಆಕ್ಸಿಜನ್ ಮತ್ತು ರೆಮ್ಡಿಸಿವರ್ ಅಗತ್ಯವಿದೆ, ಹೀಗಾಗಿ ತಮ್ಮದೇ ಸ್ವಂತ ಹಣದಲ್ಲಿ ಜಿಲ್ಲೆಗೆ ಜಂಬೋ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡುತ್ತಿದ್ದಾರೆ. ತಮ್ಮ ತಾಲೂಕಿನ ಅಕ್ಕಪಕ್ಕದಲ್ಲಿ ಆಕ್ಸಿಜನ್ ಕೊರತೆಯಿಂದ ಹಲವರು ಸಾವನ್ನಪ್ಪಿದ ಕಾರಣದಿಂದ ಆಕ್ಸಿಜನ್ ವ್ಯವಸ್ಥೆಗೆ ಮುಂದಾಗಿದ್ದಾರೆ.

ಕೊರೋನಾ ಸೋಂಕಿಗೆ ತುತ್ತಾಗಿದ್ದ ಡಾ.ಅಜಯ್ ಸಿಂಗ್ ಚಿಕಿತ್ಸೆ ಪಡೆದಿದ್ದಾರೆ. ಮಸ್ಕಿ ಮತ್ತು ಬಸವಕಲ್ಯಾಣ ಉಪ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಂಗ್ ಅವರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು.

ಮತ್ತೊಬ್ಬ ವೈದ್ಯೆ ಕಮ್ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಕ್ಷೇತ್ರ ಖಾನ್ ಪುರದಲ್ಲಿ ಗಂಬೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ. ರೆಮ್ಡಿಸಿವಿರ್, ಬೆಡ್, ಆಕ್ಸಿಜನ್ ಅಗತ್ಯವಿರುವವರು ತಮಗೆ ಕರೆ ಮಾಡುವಂತೆ ತಿಳಿಸಿ, ಅಗತ್ಯವಿರುವವರಿಗೆ ಸೌಲಭ್ಯ ಒದಗಿಸಿದ್ದಾರೆ.

ಮಹಾರಾಷ್ಟ್ರದಿಂದ ಬಂದ ಹಲವರು ವೈರಸ್ ಹರಡಿದ್ದಾರೆ. ಹಳ್ಳಿಯೊಂದರಲ್ಲಿ 144 ಸೋಂಕಿನ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಗಡಿಯಿಂದ ಖಾನಾಪುರ ತಲುಪಲು ಸುಮಾರು 1 ಗಂಟೆ ಸಮಯ ಬೇಕಾಗುತ್ತದೆ. ಇಲ್ಲಿನ ಹಲವರು ನೆರೆಯ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

SCROLL FOR NEXT