ರಾಜ್ಯ

ಸಂಸದ ತೇಜಸ್ವಿ ಸೂರ್ಯ ಮೇಲೆ ಯಾಕಿಂಥ ದಾಳಿ? ಮಂಡ್ಯ-ಚಾಮರಾಜನಗರ ನಮ್ಮ ಸೋದರ ಜಿಲ್ಲೆಗಳು: ಪ್ರತಾಪ್ ಸಿಂಹ 

Sumana Upadhyaya

ಮೈಸೂರು: ಬೆಡ್ ಬುಕ್ಕಿಂಗ್ ದಂಧೆ ಬಯಲಿಗೆಳೆದ ಯುವ ಸಂಸದ ತೇಜಸ್ವಿ ಸೂರ್ಯ ಅವರನ್ನು ಅಭಿನಂದಿಸುವ ಬದಲು ಕುಂಟು ನೆಪ ಇಟ್ಟುಕೊಂಡು ಅವರ ವಿರುದ್ಧ ದಾಳಿ ನಡೆಸುತ್ತಿರುವುದು ಏಕೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಕಾರ್ಪೊರೇಟರ್ ಗಳಿಂದ ಕೇಂದ್ರ ಸಚಿವರವರೆಗೂ, ಶಾಸಕರಿಂದ ಸಂಸದರು, ಸಚಿವರುಗಳವರೆಗೂ ಸಾವಿರಾರು ಜನರಿದ್ದಾರೆ, ಕೊರೋನಾ ಅಪ್ಪಳಿಸಿರುವ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿರುವುದು ಅನಿವಾರ್ಯ ಮತ್ತು ತುರ್ತಾಗಿದೆ.

ಈ ಸಂದರ್ಭದಲ್ಲಿ ಯುವ ಸಂಸದ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ದಂಧೆ ಹಗರಣವನ್ನು ಬಯಲಿಗೆಳೆದಿದ್ದಾರೆ, ಮಾನವೀಯತೆಯನ್ನೇ ಮರೆತು ನಡೆಯುತ್ತಿರುವ ಈ ದಂಧೆಯನ್ನು ಗೊತ್ತುಮಾಡಿ ಅದನ್ನು ಬಯಲಿಗೆಳೆದ ನಂತರ ಸಾವಿರಾರು ಬೆಡ್ ಗಳು ಸೋಂಕಿತರಿಗೆ ಸಿಗುತ್ತಿದೆ. ಇಂತಹ ಉತ್ತಮ ಕೆಲಸ ಮಾಡಿದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ, ಆಗ ಪಟ್ಟಿಯನ್ನು ಓದುವಾಗ ಒಂದೇ ಕೋಮಿಗೆ ಸೇರಿದವರ ಹೆಸರಿತ್ತು ಎಂದು ನೆಪ ಇಟ್ಟುಕೊಂಡು ಅವರು ಮಾಡಿರುವ ಒಳ್ಳೆಯ ಕೆಲಸ ಮರೆತು ತೇಜಸ್ವಿ ಸೂರ್ಯ ಅವರ ಮೇಲೆ ಅವ್ಯಾಹತವಾಗಿ ಆಕ್ರಮಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಒಂದು ಕೋಮಿನವರ ಪಟ್ಟಿ ಸಿಕ್ಕಿದ್ದರಿಂದ ಅವರ ಹೆಸರನ್ನು ತೇಜಸ್ವಿ ಸೂರ್ಯ ಹೇಳಿರಬಹುದು, ಆದರೆ ನಂತರ ಪೊಲೀಸರು ಬಂಧಿಸಿದವರಲ್ಲಿ ಬೇರೆ ಕೋಮಿನವರೂ ಇದ್ದಾರೆ, ಎಲ್ಲಾ ಕೋಮುವಿನವರಿದ್ದಾರೆ. ಹೀಗಿರುವಾಗ ಎಲ್ಲವನ್ನೂ ಬಿಟ್ಟು ಕೋಮು ವಿಚಾರ ಇಟ್ಟುಕೊಂಡು ಯುವ ಸಂಸದರ ಉತ್ತಮ ಕೆಲಸವನ್ನು ಮಟ್ಟ ಹಾಕಲು ನೋಡುವ ಕೀಳು ರಾಜಕೀಯ ಮಾಡುವ ಬದಲು ನಿಮ್ಮ ನಿಮ್ಮ ಕ್ಷೇತ್ರಗಳ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವತ್ತ ಗಮನಹರಿಸಿ ಎಂದು ಪ್ರತಾಪ್ ಸಿಂಹ ಹೇಳಿದರು.

ಚಾಮರಾಜನಗರ, ಮಂಡ್ಯ ನಮ್ಮ ಸೋದರ ಜಿಲ್ಲೆಗಳು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟ ನಂತರ ಮೈಸೂರು ಜಿಲ್ಲೆಯ ಅಧಿಕಾರಿಗಳನ್ನು ಕಟಕಟೆಯಲ್ಲಿ ತಂದು ನಿಲ್ಲುಸುವಂತಹ ಪ್ರಯತ್ನಗಳು, ಬೆಳವಣಿಗೆಗಳು ನಡೆಯಿತು. ನಂತರವೂ ಚಾಮರಾಜನಗರ, ಮಂಡ್ಯಗಳಿಂದ ಆಕ್ಸಿಜನ್ ಬೇಕೆಂದು ಅಲ್ಲಿನ ಉಸ್ತುವಾರಿ ಸಚಿವರುಗಳು ಕೇಳುವುದು, ನಮಗೆ ಬೇಕೆಂದು ನಾವು ಹೇಳಿದಾಗ ಈಗಿನ ಸಂದರ್ಭದಲ್ಲಿ ವೈರತ್ವ ಬೆಳೆಯುವ ಸಾಧ್ಯತೆಯಿರುತ್ತದೆ.

ಇನ್ನು ಮುಂದೆ ಹಾಗೆ ಆಗಬಾರದು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳು ನಮಗೆ ಸೋದರ ಜಿಲ್ಲೆಗಳಂತೆ, ಅಲ್ಲಿಗೆ ದ್ರವ ವೈದ್ಯಕೀಯ ಆಕ್ಸಿಜನ್ ಪೂರೈಸಲು ನಮಗೆ ಯಾವುದೇ ತೊಂದರೆಯಿಲ್ಲ, ಧಾರಾಳವಾಗಿ ನೀಡುತ್ತೇವೆ, ನಿಮ್ಮ ಕೋಟಾ ಎಷ್ಟಿದೆ ಎಂದು ನಿಗದಿಪಡಿಸಿಕೊಳ್ಳಿ ಎಂದು ಕೇಳಿಕೊಂಡಿದ್ದೇನೆ ಎಂದರು.

SCROLL FOR NEXT