ರಾಜ್ಯ

ಬಿಜೆಪಿ ಕೋರ್ ಕಮಿಟಿ ಸಭೆ: ಕೊರೋನಾ ನಿರ್ವಹಣೆ, ಉಪಚುನಾವಣೆ ಫಲಿತಾಂಶ ಕುರಿತು ಚರ್ಚೆ

Manjula VN

ಬೆಂಗಳೂರು: ಸತತ ಎರಡು ಗಂಟೆಗಳ ಕಾಲ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ಕೊರೋನಾ ನಿರ್ವಹಣೆ ಹಾಗೂ ಇತ್ತೀಚಿನ ಉಪಚುನಾವಣೆ ಫಲಿತಾಂಶದ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. 

ಶನಿವಾರ ವರ್ಚುಯಲ್ ವಿಧಾನದ ಮೂಲಕ ಬಿಜೆಪಿ ಕೋರ್ ಕಮಿಟಿ ಸಬೆ ನಡೆದಿದ್ದು, ಸಭೆಯಲ್ಲಿ ಕೊರೋನಾ ನಿರ್ವಹಣೆ ಜೊತೆಗೆ ಅಧಿಕಾರದಲ್ಲಿದ್ದರೂ ಇತ್ತೀಚೆಗೆ ನಡೆದ ಉಪಚುನಾವಣೆ ಹಾಗೂ ಕೆಲವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಮಟ್ಟದ ಗೆಲುವು ಅಥವಾ ಜನರ ಬೆಂಬಲ ಸಿಗದೇ ಇರುವ ಬಗ್ಗೆ ಗಂಭೀರ ಚರ್ಚೆಗಳು ನಡೆದಿದೆ ಎಂದು ತಿಳಿದುಬಂದಿದೆ. 

ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಸರ್ಕಾರದ ವರ್ಚಸ್ಸು ಹೆಚ್ಚಿಸುವುದರ ಜೊತೆಗೆ ಎರಡೂ ಒಟ್ಟಾಗಿ ಹೆಚ್ಚು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂಬ ನಿಲುವಿಗೆ ಬರಲಾಗಿದೆ. ಅಲ್ಲದೆ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ತೀರಾ ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವುದಕ್ಕೆ ಕಾರಣಗಳೇನು ಎಂಬುದನ್ನು ಪರಿಶೀಲಿಸಿ ಸರಿಪಡಿಸಲು ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ. 

ಅಲ್ಲದೆ, ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಕೈಗೊಳ್ಳಲಾಗುವ ಯಾವುದೇ ನಿರ್ಧಾರಕ್ಕೂ ಮುನ್ನ ಪಕ್ಷದ ಹಿರಿಯ ನಾಯಕರನ್ನು ಸಂಪರ್ಕಿಸಬೇಕು ಎಂದು ಸಭೆಯಲ್ಲಿ ನಾಯಕರು ಸಲಹೆಗಳುನ್ನು ನೀಡಿದ್ದಾರೆಂದು ವರದಿಗಳು ತಿಳಿಸಿವೆ.

ಶನಿವಾರ ರಾತ್ರಿ ಹೊಸ ಕೋರ್ ಕಮಿಟಿ ರಚನೆಯಾದ ಬಳಿಕ ಮೊದಲ ಬಾರಿಗೆ ವರ್ಚುಯಲ್ ಸಬೆ ನಡೆಯಿತು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ದೆಹಲಿಯಿಂದ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನಿಂದ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಿಂದ ಹೀಗೆ ಸಮಿತಿ ಸದಸ್ಯರು ತಾವಿದ್ದೆಡೆಯಿಂದಲೇ ಸಭೆಯಲ್ಲಿ ಪಾಲ್ಗೊಂಡರು. 

SCROLL FOR NEXT