ರಾಜ್ಯ

ಕೋವಿಡ್-19: ರಾಜ್ಯದಲ್ಲಿ ಗುಣಮುಖ ಸೋಂಕಿತರ ದಾಖಲೆ, ಒಂದೇ ದಿನ 34,881 ಮಂದಿ ಡಿಸ್ಚಾರ್ಜ್

Manjula VN

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ ಇತ್ತ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ.

ಹೌದು.. ಇಂದು ಒಂದೇ ದಿನ ರಾಜ್ಯಾದ್ಯಂತ ಬರೊಬ್ಬರಿ 34,881 ಮಂದಿ ಸೋಂಕಿತರು ಗುಣಮುಖರಾಗಿದ್ದು, ಇದು ರಾಜ್ಯದಲ್ಲಿ ಒಂದು ದಿನದ ಗರಿಷ್ಠ ಸೋಂಕಿತರ ಗುಣಮುಖವಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 34,881 ಮಂದಿ ಗುಣಮುಖರಾಗಿದ್ದು, ಆ ಮೂಲಕ  ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ 1,31,9301ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಅತೀ ಹೆಚ್ಚು ಗುಣಮುಖರನ್ನು ಹೊಂದಿದ ದೇಶದ ಮೂರನೇ ರಾಜ್ಯ ಎನಿಸಿಕೊಂಡಿದೆ. ಅತೀ ಹೆಚ್ಚು ಚೇತರಿಕೆ ಪ್ರಮಾಣ ಹೊಂದಿದ ರಾಜ್ಯದಲ್ಲಿ ಕೇರಳ 14,43,633 ಮೊದಲ ಸ್ಥಾನದಲ್ಲಿದೆ. 

ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ಚೇತರಿಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೇ 1 ರಂದು 21,149 ಮಂದಿ ಗುಣಮುಖರಾಗಿದ್ದರು. ಮೇ 2, 20,901, ಮೇ 3, 24,714, ಮೇ.4 26,841, ಮೇ.5 18,943, ಮೇ 6 ಮತ್ತು ಮೇ.7 ರಂದು 28,323 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದರು. ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದೀಗ ಚೇತರಿಕೆ ಪ್ರಮಾಣ ಶೇ.69.84 ರಿಂದ ಶೇ.79.34ಕ್ಕೆ ಏರಿಕೆಯಾಗಿದೆ. 

ಈ ನಡುವೆ ರಾಜ್ಯದಲ್ಲಿ ನಿನ್ನೆ ಒಂದೇ ಬರೋಬ್ಬರಿ 47,563 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 482 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,86,448ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 18,286ಕ್ಕೆ ತಲುಪಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ ಎಂದಿನಂತೆ ಏರಿಕೆಯಲ್ಲಿಯೇ ಇದ್ದು, 5,48,841ರಷ್ಟಿದೆ. ಪ್ರಸ್ತುತ ರಾಜ್ಯ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.30.28ಕ್ಕೆ ತಲುಪಿದೆ. 

ಇನ್ನು ಬೆಂಗಳೂರು ನಗರ ವೊಂದರಲ್ಲಿಯೇ ನಿನ್ನೆ 21,534 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 285 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,29,996ಕ್ಕೆ ಏರಿಕೆಯಾಗಿದೆ. ನಗರದಲ್ಲಿ ನಿನ್ನೆ ಒಂದೇ ದಿನ 18,473 ಗುಣಮುಖರಾಗಿದ್ದು, ಗುಣಮುಖರ ಸಂಖ್ಯೆ 5,77,465ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,44,754ಕ್ಕೆ ಏರಿಕೆಯಾಗಿದೆ. 

ನಿನ್ನೆ ತುಮಕೂರಿನಲ್ಲಿ 2,419, ಮೈಸೂರು 2,294, ಬಾಗಲಕೋಟೆ 1,563, ದಕ್ಷಿಣ ಕನ್ನಡ 1,513, ಕಲಬುರಗಿ 1,661, ಮಂಡ್ಯ 1,225 ಹೊಸ ಪ್ರಕರಣಗಳು ಪತ್ತೆಯಾಗಿವೆ.

SCROLL FOR NEXT