ರಾಜ್ಯ

ಕೊರೋನಾ ಲಾಕ್ ಡೌನ್ ಮೊದಲ ದಿನ ಪೊಲೀಸರ ಲಾಠಿ ರುಚಿ, ಪ್ರತಿಜ್ಞಾ ವಿಧಿ ಸ್ವೀಕಾರ, ಬಸ್ಕಿ ಹೊಡೆಸುವ ಸಜೆ; ಸಿಎಂ ಮನವಿ 

Sumana Upadhyaya

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ 14 ದಿನಗಳ ಲಾಕ್ ಡೌನ್ ಸೋಮವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಿದೆ.

ಇಂದು ಬೆಳಗ್ಗೆಯಿಂದಲೇ ಕಠಿಣ ನಿಯಮ ಜಾರಿಯಾಗಿದೆ. ಸಕಾರಣವಿಲ್ಲದೆ ರಸ್ತೆಗಿಳಿಯುವ ಮಂದಿಗೆ ಪೊಲೀಸರು ಲಾಠಿಯ ರುಚಿ ತೋರಿಸುತ್ತಿದ್ದಾರೆ. ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಬೆಂಗಳೂರಿನ ಕೋರಮಂಗಲದ ಕೃಪಾನಿಧಿ ಸರ್ಕಲ್ ನಲ್ಲಿ ವಾಹನ ಸವಾರರಿಗೆ ಪೊಲೀಸರು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ವಿನೂತನ ರೀತಿಯಲ್ಲಿ ಶಿಕ್ಷೆ ನೀಡುತ್ತಿದ್ದಾರೆ. ಇನ್ನು ಮುಂದೆ ಅನಗತ್ಯವಾಗಿ ವಾಹನ ತೆಗೆದುಕೊಂಡು ಮನೆಯಿಂದ ಹೊರಗೆ ಬರುವುದಿಲ್ಲ, ಭಾರತದ ಸಮಗ್ರತೆ, ಅಖಂಡತೆಗೆ ಕೈಜೋಡಿಸುವುದಾಗಿ ಪ್ರತಿಜ್ಞಾವಿಧಿ ಮೂಲಕ ಪೊಲೀಸರು ಬೋಧನೆ ಮಾಡಿದ್ದಾರೆ.

ನಮ್ಮ ಜೀವನದ ಅಗತ್ಯಗಳಿಗೆ ಹೊರಗೆ ಹೋದರೆ ಪೊಲೀಸರು ಹಿಡಿದು ಸುಮ್ಮಸುಮ್ಮನೆ ಗಾಡಿ ತಡೆದು ವಶಪಡಿಸಿಕೊಳ್ಳುತ್ತಿದ್ದಾರೆ, ನಮಗೆ ಹೊಡೆಯುತ್ತಿದ್ದಾರೆ ಎಂಬ ದೂರು ಸಾರ್ವಜನಿಕರಿಂದ ವಿರೋಧ ಪಕ್ಷದ ನಾಯಕರಿಂದ ಕೇಳಿಬರುತ್ತಿದೆ.

ಹೊರ ಜಿಲ್ಲೆಗಳ ಮನೆಯವರು, ಕುಟುಂಬಸ್ಥರು ಬೆಂಗಳೂರಿನಲ್ಲಿ ಅಥವಾ ಬೆಂಗಳೂರಿನಲ್ಲಿರುವವರ ಮನೆಯವರು ಬೇರೆ ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗಿರುತ್ತಾರೆ, ಅಂಥವರನ್ನು ನೋಡಲು, ಅವರಿಗೆ ಅಗತ್ಯ ವಸ್ತುಗಳನ್ನು ನೀಡಲು ಹೇಗೆ ಹೋಗುವುದು, ಅದಕ್ಕೂ ಪೊಲೀಸರು ಬಿಡುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಉಲ್ಲಂಘಿಸಿದವರಿಗೆ ಕೆಲವು ಕಡೆಗಳಲ್ಲಿ ಪೊಲೀಸರು ಬಸ್ಕಿ ಶಿಕ್ಷೆ ನೀಡುತ್ತಿದ್ದಾರೆ. 

ರಾಜ್ಯದ ಜಿಲ್ಲೆಗಳಲ್ಲಿ ಕೂಡ ಕೊರೋನಾ ಲಾಕ್ ಡೌನ್ ನಿಯಮ ಜಾರಿಯಲ್ಲಿದೆ, ಜಿಲ್ಲೆಗಳಲ್ಲಿ ಕೂಡ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಪೊಲೀಸರ ಕ್ರಮ ಬಿಗಿಯಾಗಿದೆ.

ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸೋಣ: ಕೊರೋನಾ ಸೋಂಕಿನ ಪ್ರಸರಣ ತಡೆಗೆ 14 ದಿನಗಳ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೆ ಬಂದಿದ್ದು ಎಲ್ಲಾ ನಾಗರಿಕರು ಮಾರ್ಗಸೂಚಿಗಳನ್ನು ಉತ್ಸಾಹ, ನಿಷ್ಠೆಯಿಂದ ಪಾಲಿಸಿ. ವೈರಸ್ ನಿರ್ಮೂಲನೆಗೆ ನಿಮ್ಮ ಸಹಕಾರ ಅತ್ಯಗತ್ಯ, ಒಟ್ಟಾಗಿ ನಾವೆಲ್ಲರೂ ಸೋಂಕನ್ನು ಸೋಲಿಸೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ. 
 

SCROLL FOR NEXT