ರಾಜ್ಯ

ಲಾಕ್ಡೌನ್ ಎಫೆಕ್ಟ್: ತವರಿಗೆ ವಾಪಸ್ಸಾಗಲು ಕೆಎಸ್ಆರ್ ರೈಲ್ವೇ ನಿಲ್ದಾಣಕ್ಕೆ ಧಾವಿಸಿದ ನೂರಾರು ವಲಸೆ ಕಾರ್ಮಿಕರು!

Manjula VN

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಸೋಮವಾರದಿಂದ ಎರಡು ವಾರಗಳ ಕಾಲ ಸೆಮಿ ಲಾಕ್ಡೌನ್ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಭಾನುವಾರವೂ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಮಿಕರು ನಗರ ತೊರೆದು ತವರೂರುಗಳತ್ತ ತೆರಳಿದರು. 

ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಸಾವು-ನೋವುಗಳು ಹೆಚ್ಚಾಗಿವೆ. 

ಇದೀಗ ರಾಜ್ಯ ಸರ್ಕಾರ ಸೆಮಿ ಲಾಕ್ಡೌನ್ ಜಾರಿಗೆ ಮುಂದಾಗಿರುವುದರಿಂದ ಬೆಚ್ಚಿರುವ ಜನರು ಸರಕು-ಸರಂಜಾಮು ಸಹಿತ ನಗರ ತೊರೆದರು. 

ನಗರದ ವಿವಿಧೆಡೆ ನೆಲೆಸಿರುವ ಹೊರ ರಾಜ್ಯದ ಕಾರ್ಮಿಕರು ಉರುಗಳಿಗೆ ತೆರಳುವ ಧಾವಂತದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಲಗೇಜು ಸಹಿಸ ಕೆಎಸ್ಆರ್ ರೈಲು ನಿಲ್ದಾಣಕ್ಕೆ ದೌಡಾಯಿಸಿದ್ದರು. 

ಹೊರ ರಾಜ್ಯದ ಕಾರ್ಮಿಕರಷ್ಟೇ ಅಲ್ಲದೆ, ನಗರದಲ್ಲಿ ನೆರೆಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಜನರು ನಗರ ತೊರೆದರು. ರಾಯಚೂರು, ಬೀದರ್, ಕೊಪ್ಪಳ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳ ಜನರು, ರೈಲು ಹಾಗೂ ಸರಕು ಸಾಗಣೆ ವಾಹನ ಹಿಡಿದು ತವರು ಜಿಲ್ಲೆಗಳತ್ತ ತೆರಳಿದರು. 

ರೈಲ್ವೇ ನಿಲ್ದಾಣದಲ್ಲಿ ಕೆಲವರಂತೂ ಮಾಹಿತಿ ತಿಳಿಯದ ಕಾರಣ ಟಿಕೆಟ್ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತ್ತು. 

ಮೂರು ವರ್ಷದ ಮಗು, ತಾಯಿ, ಪತ್ನಿ ಹಾಗೂ ಸಹೋದರನೊಂದಿಗೆ ಕಲಬುರಗಿಗೆ ತೆರಳುವ ಸಲುವಾಗಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಮೊಹಮ್ಮದ್ ರಫೀಕ್ ಎಂಬುವವರು ಮಾತನಾಡಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಇದೀಗ ಕೆಲಸ ಇಲ್ಲ ಎಂದರೆ, ನಾನು ಹೇಗೆ ಕುಟಂಬವನ್ನು ನೋಟಿಕೊಳ್ಳಲಿ ಎಂದು ಪ್ರಶ್ನಿಸಿದ್ದಾರೆ. 

ಹೆಚ್ಎಸ್ಆರ್ ಲೇಔಟ್ ನಲ್ಲಿ ಸಲೂನ್ ನಲ್ಲಿ ಕೆಲಸ ಮಾಡುತ್ತಿರು ವ್ಯಕ್ತಿ ಮೊಹಮ್ಮದ್ ಅಕ್ರಮ್ ಹಾಗೂ ಜೀಶಾ ಎಂಬುವವರು ಮಾತನಾಡಿ, ಕಳೆದ ಒಂದು ವಾರದಿಂದ ನಮಗೆ ಕೆಲಸವಿಲ್ಲ. ಇನ್ನೂ ಕೆಲ ದಿನಗಳ ಕಾಲ ನಮಗೆ ಕೆಲಸವಿಲ್ಲ ಎಂದೆನಿಸುತ್ತಿದೆ. ಹೀಗಾಗಿ ನಾನು ಉತ್ತರಾಖಂಡಕ್ಕೆ ದೆಹಲಿ ಮೂಲಕ ಹೋಗಲು ನಿರ್ಧರಿಸಿದ್ದೇವೆಂದು ಹೇಳಿದ್ದಾರೆ. 

ಕೆಲವರು ರೈಲ್ವೇ ನಿಲ್ದಾಣದಲ್ಲಿಯೇ ಟಿಕೆಟ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಹೇಗಾದರೂ ತವರು ತಲುಪುವ ತವಕದಲ್ಲಿದ್ದರು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾದ್ದರಿಂದ ನಾವು ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ನೀಡುವುದನ್ನು ಸ್ಥಗಿತಗೊಳಿಸಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT