ರಾಜ್ಯ

ಕೊಡಗಿನಲ್ಲಿ ಸೋಂಕಿತರ ಸಾವು ಹೆಚ್ಚಳ: ಸ್ವಯಂ ಸೇವಕರಿಂದ 101 ಶವಗಳ ಸಂಸ್ಕಾರ, ಚಿತಾಗಾರ ಅಭಿವೃದ್ಧಿಗೆ ಒತ್ತಾಯ

Shilpa D

ಮಡಿಕೇರಿ: ನಾವು ಒಂದು ವರ್ಷದ ಹಿಂದೆ ಈ ಸೇವೆಯನ್ನು ಪ್ರಾರಂಭಿಸಿದಾಗ ಮುಂದೊಂದು ದಿನ ಅದು ತುಂಬಾ ತೀವ್ರವಾಗಲಿದೆ ಎಂದು ನಮಗೆ ತಿಳಿದಿರಲಿಲ್ಲ. ನಾವು ಒತ್ತಡಕ್ಕೊಳಗಾಗಿದ್ದೇವೆ ಮತ್ತು ಭಾವನಾತ್ಮಕವಾಗಿ ಬರಿದಾಗಿದ್ದೇವೆ ಎಂದು ಕೊಡಗಿನಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನಡೆಸುವ ವಿಶ್ವ ಹಿಂದೂ ಪರಿಷತ್‌ನ ಸ್ವಯಂ ಸೇವಕರೊಬ್ಬರು ತಿಳಿಸಿದ್ದಾರೆ.

ಕೊಡಗಿನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಯಂ ಸೇವಕರಿಂದ ಕೋವಿಡ್ ಸಂತ್ರಸ್ತರ ಅಂತ್ಯಕ್ರಿಯೆ ನಡೆಸಲಾಯಿತು, ಕೋವಿಡ್ ನಿಂದ ಮೃತಪಟ್ಟ ವರ ಅಂತ್ಯ ಸಂಸ್ಕಾರ ನಡೆಸಲು ಸುಮಾರು 100 ಮಂದಿ ಮುಂದೆ ಬಂದರು.

ಕಳೆದ ವರ್ಷ ಜಿಲ್ಲೆಯಲ್ಲಿ ಕಡಿಮೆ ಸಾವಾಗಿದ್ದವು, ಆದರೆ ಈ ವರ್ಷ ಅಧಿಕವಾಗಿ ಕೊರೋನಾದಿಂದ ಸಾವನ್ನಪ್ಪುತ್ತಿದ್ದಾರೆ,  ಒಂದೇ ದಿನದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಮಡಿಕೇರಿಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಸ್ಕಾರ ನಡೆಸಲು ನಿಗದಿ ಪಡಿಸಿರುವ ಚಿತಾಗಾರದಲ್ಲಿ ಒಂದು ಬಾರಿಗೆ ಕೇವಲ ಮೂರು ಶವ ಸಂಸ್ಕಾರ ಮಾಡಬಹುದಾಗಿದೆ.

ನಾವು ಸಿಮೆಂಟೆಡ್ ರಚನೆಯ ಮೇಲೆ ಎರಡು ಶವಗಳನ್ನು ಮತ್ತು ಮೂರನೆಯದನ್ನು ತಾತ್ಕಾಲಿಕ ಸೆಟಪ್‌ನಲ್ಲಿ ಮತ್ತೊಂದು ಶವ ದಹಿಸಬಹುದಾಗಿದೆ. ಕೋವಿಡ್ ಸಾವುಗಳು ಹೆಚ್ಚುತ್ತಿವೆ. ಮೂರಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿದಾಗ, ದೇಹಗಳು ಸಂಪೂರ್ಣವಾಗಿ ಸುಡಲು ನಾವು ಮೂವರಿಗೂ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಕಾಯಬೇಕಾಗಿದೆ. ನಂತರ ನಾವು ಚಿತಾಭಸ್ಮವನ್ನು ಸಂಗ್ರಹಿಸಿ ಸಂಬಂಧಿಕರಿಗೆ ಹಸ್ತಾಂತರಿಸುತ್ತೇವೆ ಎಂದು ಸ್ವಯಂಸೇವಕರೊಬ್ಬರು ತಿಳಿಸಿದ್ದಾರೆ.

"ನಾವು ನಮ್ಮ ಪಿಪಿಇ ಕಿಟ್‌ಗಳನ್ನು ವಿಲೇವಾರಿ ಮಾಡುತ್ತೇವೆ, ನಮ್ಮನ್ನು ಸ್ವಚ್ಛಗೊಳಿಸುತ್ತೇವೆ ಮತ್ತು ನಂತರ ಉಳಿದ ಶವಗಳನ್ನು ಸಂಗ್ರಹಿಸಲು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಹಿಂತಿರುಗುತ್ತೇವೆ. ನಾವು ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸುತ್ತೇವೆ. ಹೆಚ್ಚಿನ ಸಾವುಗಳು ಸಂಭವಿಸಿದಾಗ, ನಮ್ಮ ದಿನದ ಬಹುಪಾಲು ಶವಾಗಾರದಲ್ಲಿ ಕಳೆಯಲಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ಇದುವರೆಗೂ ಸುಮಾರು 101 ಶವಗಳ ಸಂಸ್ಕಾರ ನಡೆಸಲಾಗಿದೆ. ಶವಸಂಸ್ಕಾರಕ್ಕೆ ಯಾವುದೇ ದೇಣಿಗೆ ಪಡೆಯದೇ ನಿಸ್ವಾರ್ಥವಾಗಿ ಅಂತಿಮ ವಿಧಿವಿಧಾನ ನಡೆಸಲಾಗಿದೆ. ನಮಗೆ ಆರೋಗ್ಯ ವಿಮೆ ನೀಡುವಂತೆ ಜಿಲ್ಲಾಡಳಿತಕ್ಕೆ ನಾವು ಮನವಿ ಮಾಡುತ್ತಿದ್ದೇವೆ, ನಾಳೆ ನಮಗೆ ಏನಾದರೂ ಹೆಚ್ಚು ಕಡಿಮೆಯಾದರೆ ಅದರಿಂದ ಬರುವ ಹಣದಲ್ಲಿ ನಮ್ಮ ಕುಟುಂಬಗಳು ಜೀವನ ನಡೆಸಲಿವೆ ಎಂದು ಸ್ವಯಂ ಸೇವಕರೊಬ್ಬರು ತಿಳಿಸಿದ್ದಾರೆ.

ಸಾಮಾಜಿಕ ಸೇವೆ ಮಾತ್ರ ನಮ್ಮ ಜೀವನದ ಭಾಗವಾಗಿದೆ. ಅಲ್ಲದೆ, ಸರ್ಕಾರ ಚಿತಾಗಾರವನ್ನು ವಿಸ್ತರಿಸಬಹುದು ಮತ್ತು ಸುಧಾರಿಸಬಹುದು, ಇದರಿಂದ ನಮ್ಮ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಸ್ವಯಂಸೇವಕರೊಬ್ಬರು ಹೇಳಿದ್ದಾರೆ.

SCROLL FOR NEXT