ರಾಜ್ಯ

ಐಐಎಸ್ಸಿ ಆಮ್ಲಜನಕ ಸಾಂದ್ರಕವನ್ನು ಮೌಲ್ಯೀಕರಿಸಲಾಗುತ್ತಿದೆ: ಸಚಿವ ಸುಧಾಕರ್ 

Manjula VN

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ) 10 ಎಲ್ಪಿಎಂ ಸಾಮರ್ಥ್ಯದ ಆಮ್ಲಜನಕ ಸಾಂದ್ರಕವನ್ನು ಅಭಿವೃದ್ಧಿಪಡಿಸಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಕ್ಲಿನಿಕಲ್ ಪರೀಕ್ಷೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ಕೋವಿಡ್-19 ವಿರುದ್ಧದ ಹೋರಾಟ ಸಹಯೋಗದಲ್ಲಿ ಕಾರ್ಯನಿರ್ವಹಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಐಐಎಸ್‍ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಜೊತೆ ನಿನ್ನೆಯಷ್ಟೇ ಚರ್ಚೆ ನಡೆಸಿದರು.

ಚರ್ಚೆ ವೇಳೆ ಪ್ರೊ.ರಂಗರಾಜನ್ ಅವರು, 30 ಡಿಗ್ರಿ ಸೆಲ್ಸಿಯಸ್ ತಾಪಮಾನದದಲ್ಲೂ ದಾಸ್ತಾನು ಮಾಡಬಹುದಾದ ಲಸಿಕೆ, ಹೆಚ್ಚು ದಕ್ಷತೆಯಿಂದ ಕೂಡಿರುವ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಕೋವಿಡ್ ವಿರುದ್ಧ ಹೋರಾಟಕ್ಕೆ ಅಗತ್ಯವಾದ ಆವಿಷ್ಕಾರಗಳನ್ನು ಐಐಎಸ್ ಸಿ ವಿಜ್ಞಾನಿಗಳು ನಡೆಸುತ್ತಿರುವ ಕುರಿತು ಸಚಿವರಿಗೆ ವಿವರಿಸಿದರು.

10 ಎಲ್ ಪಿಎಂ ಸಾಮರ್ಥ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಐಐಎಸ್ ಸಿ ಅಭಿವೃದ್ಧಿಪಡಿಸಿದ್ದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದೆ. ಚೈನೀಸ್ ಕಾನ್ಸಂಟ್ರೇಟರ್ ಗಳು ಶೇ.40-50 ಆಕ್ಸಿಜನ್ ನೀಡುತ್ತಿದ್ದರೆ, ಐಐಎಸ್ ಸಿಯ ಕಾನ್ಸಂಟ್ರೇಟರ್ ಗಳು ಶೇ.90 ರಷ್ಟು ಆಕ್ಸಿಜನ್ ನೀಡುತ್ತವೆ. ಹೆಚ್ಚು ದಕ್ಷತೆಯಿಂದ ಕೂಡಿರುವ ಈ ಕಾನ್ಸಂಟ್ರೇಟರ್ ನ ಕ್ಲಿನಿಕಲ್ ಪರೀಕ್ಷೆಗೆ ಹಾಗೂ ತುರ್ತು ಬಳಕೆಗೆ ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‍ಸಿಒ) ನಿಂದ ಅನುಮೋದನೆ ದೊರೆಯಲು ಸಹಕರಿಸಬೇಕು ಎಂದು ಪ್ರೊ.ರಂಗರಾಜನ್ ಸಚಿವರಿಗೆ ಮನವಿ ಮಾಡಿದರು.

ಈ ಬಗ್ಗೆ ಭರವಸೆ ನೀಡಿದ ಸಚಿವ ಡಾ.ಕೆ.ಸುಧಾಕರ್ ಅವರು, ಈ ಕೂಡಲೇ ಈ ಆವಿಷ್ಕಾರದ ಕುರಿತು ಆರ್ ಜಿಯುಎಚ್‍ಎಸ್ ಕುಲಪತಿಯವರೊಡನೆ ಚರ್ಚಿಸಲಾಗುವುದು ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

SCROLL FOR NEXT