ರಾಜ್ಯ

ಕೋವಿಡ್ ಲಸಿಕೆ ಖರೀದಿಗೆ ಕಾಂಗ್ರೆಸ್ ಸಹಾಯ ಹಸ್ತ; ಶಾಸಕರ ನಿಧಿಯಿಂದ 100 ಕೋಟಿ ರೂ. ನೆರವು: ಸಿದ್ದರಾಮಯ್ಯ

Sumana Upadhyaya

ಬೆಂಗಳೂರು: ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ನೀಡಲಾಗುತ್ತಿರುವ ಲಸಿಕೆ ಖರೀದಿಗೆ ಸರ್ಕಾರಕ್ಕೆ ಕರ್ನಾಟಕ  ಕಾಂಗ್ರೆಸ್ ಸಹಾಯ ಹಸ್ತ ಚಾಚಿದೆ.

ಈ ವಿಷಯವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ, ವಿರೋಧ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಪ್ರತಿ ಶಾಸಕರು ಒಂದು ಕೋಟಿ ರೂಪಾಯಿಗಳನ್ನು ನೀಡುವ ಮೂಲಕ 100 ಕೋಟಿ ರೂಪಾಯಿ ಸಂಗ್ರಹ ಮಾಡಿ ಸರ್ಕಾರಕ್ಕೆ ನೀಡುತ್ತೇವೆ ಎಂದು ಹೇಳಿದರು.

ಪ್ರತಿ ಶಾಸಕರು, ಸಂಸದರಿಗೆ ಪ್ರತಿವರ್ಷ ನೀಡಲಾಗುವ ಪ್ರದೇಶಾಭಿವೃದ್ಧಿ ನಿಧಿಯಡಿ ತಲಾ 1 ಕೋಟಿ ರೂಪಾಯಿಯನ್ನು ನೀಡಲಾಗುತ್ತದೆ. ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಪ್ರದೇಶಾಭಿವೃದ್ಧಿ ನಿಧಿಯಡಿ ತಲಾ 2 ಕೋಟಿ ರೂಪಾಯಿ, ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿಗೆ ತಲಾ 5 ಕೋಟಿ ರೂಪಾಯಿ ಸಿಗುತ್ತದೆ, ಅದರಡಿ ರಾಜ್ಯದಲ್ಲಿರುವ 95 ಮಂದಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಕೊರೋನಾ ಲಸಿಕೆಗೆ ಹಣ ನೀಡಲಿದ್ದಾರೆ ಎಂದರು. ಅದನ್ನು ಸರ್ಕಾರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ನೇರವಾಗಿ ಖರೀದಿಸಲು ಅವಕಾಶ ನೀಡಿ: ಕೊರೋನಾ ಲಸಿಕೆ ಖರೀದಿ ಮಾಡಿ ಜನರಿಗೆ ಸರಿಯಾಗಿ ನೀಡುವಲ್ಲಿ ಕೇಂದ್ರದ ಮೋದಿ ಹಾಗೂ ರಾಜ್ಯದ ಬಿ ಎಸ್ ವೈ ಸರ್ಕಾರ ವಿಫಲವಾಗಿದೆ. ಹೀಗಾಗಿ ಕಂಪೆನಿಯಿಂದ ನೇರವಾಗಿ ಖರೀದಿ ಮಾಡಲು ಅವಕಾಶ ನೀಡಿ ಎಂದು ನಾವು ಸರ್ಕಾರವನ್ನು ಕೇಳುತ್ತೇವೆ. ಲಸಿಕೆ ಉತ್ಪಾದಕ ಕಂಪೆನಿಗಳಿಂದ ನೇರವಾಗಿ ಲಸಿಕೆ ಸಂಗ್ರಹಿಸಿ ಜನರಿಗೆ ವಿತರಿಸಲು ನೆರವಾಗಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಡೋಸ್ ಗಳ ಮಧ್ಯೆ ಅಷ್ಟೊಂದು ಅಂತರವೇಕೆ: ಕೊರೋನಾ ಲಸಿಕೆ ನೀಡಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೇಜವಬ್ದಾರಿಯಿಂದ ವರ್ತಿಸುತ್ತಿವೆ. ಕೋವಿಶೀಲ್ಡ್ ಲಸಿಕೆ ಡೋಸ್ ನೀಡಿಕೆಯಲ್ಲಿ 14ರಿಂದ 16 ವಾರಗಳ ಅಂತರವೇಕೆ, ಲಸಿಕೆ ನೀಡುವ ವಿಚಾರದಲ್ಲಿ ಕೂಡ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡುತ್ತಿದೆ, ತಜ್ಞರು ಹೇಳುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿವೆ ಎಂದು ನನಗನಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

SCROLL FOR NEXT