ರಾಜ್ಯ

ಲಸಿಕೆಯ ಎರಡು ಡೋಸ್ ಗಳ ಮಧ್ಯೆ ಅಂತರ ಹೆಚ್ಚಿಸಿದ ಕೇಂದ್ರ ಸರ್ಕಾರ: ವೈದ್ಯಕೀಯ ವೃಂದದಲ್ಲಿ ಗೊಂದಲ, ಪ್ರಶ್ನೆಗಳಿಗೆ ಆಸ್ಪದ!

Sumana Upadhyaya

ಬೆಂಗಳೂರು: ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅವಧಿಯನ್ನು 12ರಿಂದ 16 ವಾರಗಳಿಗೆ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರ ಈಗ ವೈದ್ಯಕೀಯ ವೃಂದ, ಸಾರ್ವಜನಿಕ ಆರೋಗ್ಯ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ರಾಷ್ಟ್ರೀಯ ತಾಂತ್ರಿಕ ರೋಗನಿರೋಧಕ ಸಲಹಾ ಗುಂಪಿನ ಶಿಫಾರಸಿನ ಮೇರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಎರಡು ಡೋಸ್ ಗಳ ಅವಧಿಯನ್ನು ಹಿಂದೆ ಇದ್ದ 4ರಿಂದ 8 ವಾರಗಳಿಂದ 12ರಿಂದ 16 ವಾರಗಳಿಗೆ ವಿಸ್ತರಿಸಿದೆ.

ಹಲವು ರಾಜ್ಯಗಳು ಇಂದು ಕೊರೋನಾ ಲಸಿಕೆಯ ಕೊರತೆಯನ್ನು ಎದುರಿಸುತ್ತಿದ್ದು, ಸರ್ಕಾರ ಜನರಿಗೆ ಲಸಿಕೆ ಪೂರೈಸಲು ಸಾಧ್ಯವಾಗದಿರುವುದರಿಂದ ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಈ ನಿರ್ಧಾರ ಈಗ ಮೊದಲ ಡೋಸ್ ತೆಗೆದುಕೊಂಡು ಎರಡನೇ ಡೋಸ್ ಪಡೆಯುವವರಿಗೆ ಗೊಂದಲ ಸೃಷ್ಟಿಸಿದೆ.

ಲಸಿಕಾ ತಜ್ಞನಾಗಿ ದೇಹದಲ್ಲಿ ಲಸಿಕೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾನು ಬಲ್ಲೆ. ಮೊದಲ ಡೋಸ್ ಸಂವೇದನಾಶೀಲವಾಗಿದ್ದು, ಒಂದು ವರ್ಷದೊಳಗೆ ಅದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.ಸರ್ಕಾರದಲ್ಲಿ ಕೊರೋನಾ ಲಸಿಕೆ ಕೊರತೆ ಏಕೆ ಉಂಟಾಗಿದೆ, ಸಾಕಷ್ಟು ಮೊದಲೇ ಆರ್ಡರ್ ಕೊಟ್ಟಿರಲಿಲ್ಲವೇ, ಉತ್ಪಾದಕರ ಮೇಲೆ ಅವಲಂಬಿಸಿಕೊಂಡಿದ್ದಾರೆಯೇ, ಸರ್ಕಾರದ ಯೋಜನೆ ಮತ್ತು ಲಸಿಕೆ ತಯಾರಕರ ಮಧ್ಯೆ ಖಂಡಿತವಾಗಿಯೂ ಹೊಂದಾಣಿಕೆ ಕಂಡುಬರುತ್ತಿಲ್ಲ ಎಂದು ಸಿಎಂಸಿ ವೆಲ್ಲೂರಿನ ಮಾಜಿ ಪ್ರೊಫೆಸರ್ ಆಗಿರುವ ಡಾ ಜಾನ್ ಜಾಕೊಬ್ ಹೇಳುತ್ತಾರೆ.

ಒಂದು ಡೋಸ್ ನಿಂದ ಇನ್ನೊಂದು ಡೋಸ್ ಗೆ 90 ದಿನಗಳ ಅಂತರವಿದ್ದರೆ ಲಸಿಕೆಗಳ ಕಾರ್ಯದಕ್ಷತೆ ಹೆಚ್ಚಿರುತ್ತದೆ ಎಂದು ಇಂಗ್ಲೆಂಡಿನ ವೈದ್ಯಕೀಯ ಅಧ್ಯಯನ ಹೇಳುತ್ತದೆ ಎನ್ನುತ್ತಾರೆ ತಜ್ಞರು. ಇಂಗ್ಲೆಂಡ್ ಮತ್ತು ಕೆನಡಾಗಳಲ್ಲಿ ಹೀಗೆ ಮಾಡಿದ್ದಾರೆ. ಆದರೆ ನಮ್ಮ ಸರ್ಕಾರ ಇದನ್ನು ಏಕೆ ಮೊದಲೇ ಯೋಚಿಸಲಿಲ್ಲ. ಕೆಲವೇ ದಿನಗಳ ಹಿಂದೆ ಎರಡನೇ ಡೋಸ್ ತೆಗೆದುಕೊಳ್ಳುವುದರ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದ ಸರ್ಕಾರ ಈಗ ಲಸಿಕೆ ಕೊರತೆ ಎದುರಿಸುತ್ತಿದೆ ಎಂದು ಹಿರಿಯ ವೈದ್ಯರೊಬ್ಬರು ಹೇಳುತ್ತಾರೆ.

18ರಿಂದ 44 ವರ್ಷದೊಳಗಿನವರಿಗೆ ಸರ್ಕಾರ ಲಸಿಕೆ ನೀಡುವಿಕೆ ಸ್ಥಗಿತಗೊಳಿಸಿದೆ, 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡುವುದರ ಮೇಲೆ ಸದ್ಯ ಗಮನ ಹರಿಸಲಾಗುವುದು ಎಂದು ಹೇಳಿದೆ, ಸರ್ಕಾರದ ಈ ನಿರ್ಧಾರಗಳು ಗೊಂದಲ ಸೃಷ್ಟಿಸುವುದಿಲ್ಲವೇ ಎಂದು ವೈದ್ಯರು ಕೇಳುತ್ತಾರೆ.

SCROLL FOR NEXT