ರಾಜ್ಯ

ಟೌಕ್ಟೇ ಚಂಡಮಾರುತಕ್ಕೆ ಬೆಳಗಾವಿಯಲ್ಲಿ ಇಬ್ಬರು ಬಲಿ: ಗೋಡೆ ಕುಸಿದು ಅಜ್ಜಿ, ಮೊಮ್ಮಗ ದುರ್ಮರಣ

Raghavendra Adiga

ಬೆಳಗಾವಿ: ಟೌಕ್ಟೇ ಚಂಡಮಾರುತ ರಾಜ್ಯದ ಬೆಳಗಾವಿಯಲ್ಲಿ ಎರಡು ಜೀವಗಳ ಬಲಿ ಪಡೆದಿದೆ. ಬೆಳಗಾವಿಯ ಖಾನಾಪುರ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ವಾಸಿಸುತ್ತಿದ್ದ ಮಹಿಳೆ ಮತ್ತು ಆಕೆಯ ಮೊಮ್ಮಗ ಬೆಳಿಗ್ಗೆ 9 ಗಂಟೆಗೆ ಗಾಳಿ ಜೋರಾಗಿ ಬೀಸಿದ ಪರಿಣಾಮ  ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ.

ಮೃತರನ್ನು ದೊಡ್ಡವ್ವ ರುದ್ರಪ್ಪ ಪತ್ತಾದ್ (55) ಮತ್ತು ಅವರ ಮೊಮ್ಮಗ ಅಭಿಷೇಕ್ ಸುರೇಶ್ (3) ಎಂದು ಗುರುತಿಸಲಾಗಿದೆ. ಮಹಿಳೆಯ ಮಗ ಮತ್ತು ಸೊಸೆ ದುರಂತದಿಂದ ಪಾರಾದರೂ ಗಾಯಗೊಂಡಿದ್ದಾರೆ. ಸ್ಥಳೀಯರು ಮೃತದೇಹಗಳನ್ನು ಅವಶೇಷಗಳಿಂದ ತೆಗೆದಿದ್ದು ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿದ್ದಾರೆ.

ಏತನ್ಮಧ್ಯೆ, ಭಾನುವಾರ ಬೆಳಿಗ್ಗೆ ಭಾರೀ ಗಾಳಿಯ ವೇಗದಿಂದಾಗಿ ಅದೇ ತಾಲ್ಲೂಕಿನ ಪರ್ವಾಸ್ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಕಟ್ಟಡದ ತಗಡಿನ ಛಾವಣಿ ಹಾರಿ ಹೋಗಿದೆ. ಅಲ್ಲದೆ ಗ್ರಾಮದ ಇತರೆ ಮನೆಗಳ ಛಾವಣಿ ಹಾಗೂ ಹಂಚುಗಳು ಸಹ ಹಾನಿಗೊಳಗಾಗಿದೆ.

ಗುಡುಗು ಮತ್ತು ಮಿಂಚಿನ ಆರ್ಭಟದಿಂದ ಭಯಗೊಂಡ ಹಸುವೊಂದು ಶನಿವಾರ ರಾತ್ರಿ ಅಥಣಿ ಪಟ್ಟಣದ ಮದಬಾವಿ ರಸ್ತೆಯಲ್ಲಿ ತೆರೆದ ಬಾವಿಗೆ ಬಿದ್ದು ಸಾವು ಬದುಕಿನೊಂದಿಗೆ ಹೋರಾಡುತ್ತಿತ್ತು. ಆಗ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಅಧಿಕಾರಿಗಳನ್ನು ಸ್ಥಳೀಯರು ಹಸುವನ್ನು ರಕ್ಷಿಸಿದ್ದಾರೆ.

ಸಿಪಿಇಡಿ ಮೈದಾನದಲ್ಲಿ ತಾತ್ಕಾಲಿಕ ತರಕಾರಿ ಮಾರುಕಟ್ಟೆ ಸ್ಥಾಪಿಸುವ ಅಧಿಕಾರಿಗಳ ನಿರ್ಧಾರಕ್ಕೆ ವಿರೋಧ

ಎಪಿಎಂಸಿ ಮಾರುಕಟ್ಟೆಯನ್ನು ವಿಕೇಂದ್ರೀಕರಿಸಲು ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಸಗಟು ತರಕಾರಿ ಮಾರುಕಟ್ಟೆ ಭಾನುವಾರ ಭಾರಿ ಮಳೆಯ ನಂತರ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ನೀರು ತಾತ್ಕಾಲಿಕ ತರಕಾರಿ ಮಳಿಗೆಗಳಿಗೆ ನುಗ್ಗಿದೆ. ಪರಿಣಾಮ ತರಕಾರಿಗಳೆಲ್ಲಾ ಹಾಳಾಗಿದೆ. ಇದೀಗ ರೈತರು ಮತ್ತು ವ್ಯಾಪಾರಿಗಳು ಈ ಮಾರುಕಟ್ಟೆಯನ್ನು ತೆರೆದ ಮೈದಾನದಲ್ಲಿ ಸ್ಥಾಪಿಸಲು ಸೂಚಿಸಿದ ಪ್ರಾಧಿಕಾರವನ್ನು ದೂಷಿಸುತ್ತಿದ್ದಾರೆ, ನಮ್ಮ ನಷ್ಟಕ್ಕೆ ಯಾರು ಹೊಣೆ ಎಂದು ಅವರು ಪ್ತಶ್ನಿಸಿದ್ದಾರೆ.

ಎಪಿಎಂಸಿಯಲ್ಲಿ ಸುಸಜ್ಜಿತ ಮಾರುಕಟ್ಟೆ ಇದ್ದು, ಬೇಸಿಗೆ ಮತ್ತು ಮಳೆಗಾಲದಲ್ಲಿ ತರಕಾರಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬಹುದು, ಆದರೆ ಜಿಲ್ಲಾ ಪ್ರಾಧಿಕಾರದ ಈ ನಿರ್ಧಾರದಿಂದಾಗಿ ರೈತರು ಭಾರಿ ನಷ್ಟವನ್ನು ಅನುಭವಿಸಿದ್ದಾಗಿ  ವ್ಯಾಪಾರಿಗಳು ಆರೋಪಿಸಿದ್ದಾರೆ.

ಭಾನುವಾರ ಬೆಳಿಗ್ಗೆ ತನಕ ಗಾಳಿ ಜೋರಾಗಿದ್ದ ಪರಿಣಾಮ ಜಿಲ್ಲೆಯ ಬೆಳಗಾವಿ, ಖಾನಾಪುರ, ಹುಕ್ಕೇರಿ, ಸವದತ್ತಿ , ಬೈಲಹೊಂಗಲ ಚಿಕ್ಕೋಡಿ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ.
 

SCROLL FOR NEXT