ರಾಜ್ಯ

ಸಮಯ ಮೀರುತ್ತಿದೆ: ಕರ್ನಾಟಕದಲ್ಲಿ ಶೇ.82 ರಷ್ಟು ಮಂದಿಗೆ ಲಸಿಕೆ ಇನ್ನಷ್ಟೇ ನೀಡಬೇಕಿದೆ! 

Srinivas Rao BV

ಬೆಂಗಳೂರು: ಕೋವಿಡ್-19 ನ ಎರಡನೇ ಅಲೆಯ ಹೊಡೆತಕ್ಕೆ ನಲುಗಿರುವ ಕರ್ನಾಟಕಕ್ಕೆ ಮೂರನೆ ಅಲೆಯೂ ಅಪ್ಪಳಿಸುವ ಅಪಾಯವಿದೆ. ಈ ನಡುವೆ ಕೋವಿಡ್-19 ಲಸಿಕೆಗೆ ಅರ್ಹತೆ ಇರುವ ಶೇ.82 ರಷ್ಟು ಮಂದಿ ಲಸಿಕೆ ಪಡೆಯುವುದಕ್ಕೆ ಕಾಯುತ್ತಿದ್ದಾರೆ. 

ರಾಜ್ಯಾದ್ಯಂತ 5.11 ಕೋಟಿ ಮಂದಿ (18 ವರ್ಷದ ಮೇಲ್ಪಟ್ಟವರೂ ಸೇರಿ) ಲಸಿಕೆ ಪಡೆಯುವುದಕ್ಕೆ ಅರ್ಹರಿದ್ದಾರೆ. ಲಸಿಕೆ ಅಭಿಯಾನ ಪ್ರಾರಂಭವಾದಾಗಿನಿಂದ (ಜನವರಿ ತಿಂಗಳಿನಿಂದ) ಮೇ.16 ವರೆಗೂ 1,11,88,143 ಮಂದಿಗೆ ಲಸಿಕೆ ನೀಡಲಾಗಿದ್ದು, ಇನ್ನೂ 4.22 ಕೋಟಿ ಮಂದಿಗೆ ಲಸಿಕೆ ನೀಡಬೇಕಿದ್ದು, ಶೇ.82 ರಷ್ಟು ಮಂದಿ ಲಸಿಕೆಗಾಗಿ ಕಾಯುತ್ತಿದ್ದಾರೆ. ಈ ಪೈಕಿ 66.4 ಲಕ್ಷ ಮಂದಿ ಫಲಾನುಭವಿಗಳು ಎರಡನೇ ಡೋಸ್ ಗಾಗಿ ಕಾಯುತ್ತಿದ್ದಾರೆ. 

ಅಂಕಿ-ಅಂಶಗಳು ಹೀಗಿದ್ದು, ಲಸಿಕೆ ಅಭೊಯಾನವನ್ನು ಚುರುಕುಗೊಳಿಸುವುದು ಆರೋಗ್ಯ ಇಲಾಖೆಗೆ ಸವಾಲಿನ ಸಂಗತಿಯಾಗಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ 8.6 ಲಕ್ಷ ಆರೋಗ್ಯ ಕಾಳಜಿ ನೌಕರರಿಗೆ ಕೋವಿಡ್-19 ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಈವರೆಗೂ 4,60,437 ಮಂದಿಗೆ ಅಷ್ಟೇ ಎರಡೂ ಡೋಸ್ ಗಳ ಲಸಿಕೆ ದೊರೆತಿದೆ. ಕನಿಷ್ಟ 2.4 ಲಕ್ಷ ಆರೋಗ್ಯ ಕಾಳಜಿ ಕಾರ್ಯಕರ್ತರು ಎರಡನೇ ಡೋಸ್ ಲಸಿಕೆಗೆ ಕಾಯುತ್ತಿದ್ದರೆ 1.6 ಲಕ್ಷ ಮಂದಿ ಇನ್ನೂ ಮೊದಲ ಡೋಸ್ ಗಾಗಿಯೇ ಕಾಯುತ್ತಿದ್ದಾರೆ. ಈ ಸಂಖ್ಯೆಗಳನ್ನು ತಲುಪುವುದಕ್ಕೆ ಸರ್ಕಾರಕ್ಕೆ ತಕ್ಷಣಕ್ಕೆ 5.6 ಲಕ್ಷ ಡೋಸ್ ಗಳಷ್ಟು ಲಸಿಕೆ ಅವಶ್ಯಕತೆ ಇದೆ. 

ಮುನ್ನೆಲೆ ಕಾರ್ಯಕರ್ತರಿಗೆ 5.4 ಲಕ್ಷ ಲಸಿಕೆಗಳು ಒಟ್ಟಾರೆ ಸಿಗಬೇಕಿದೆ. ಇನ್ನು ಮುನ್ನೆಲೆ ಕಾರ್ಯಕರ್ತರ ವಿಷಯದಲ್ಲಿ 6 ಲಕ್ಷ ಟಾರ್ಗೆಟ್ ನ್ನು ಹೊಂದಲಾಗಿದ್ದು, 1.2 ಲಕ್ಷ ಮಂದಿ ಇನ್ನೂ ಮೊದಲ ಡೋಸ್ ನ್ನೇ ಪಡೆದಿಲ್ಲ. 3 ಲಕ್ಷ ಮಂದಿ ಎರಡನೇ ಡೋಸ್ ಗಾಗಿ ಕಾಯುತ್ತಿದ್ದಾರೆ. ಈ ವಿಭಾಗದವರಿಗೆ ಎರಡೂ ಡೋಸ್ ಗಳನ್ನು ಪೂರೈಸುವುದಕ್ಕೆ ಸರ್ಕಾರಕ್ಕೆ ಒಟ್ಟು 5.4 ಲಕ್ಷ ಲಸಿಕೆಗಳ ಅಗತ್ಯವಿದೆ. 

ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಯ ಪ್ರಕಾರ 1.5 ಲಕ್ಷ ಡೋಸ್ ಗಳಷ್ಟು ಕೋವ್ಯಾಕ್ಸಿನ್ ಹಾಗೂ 6.5 ಲಕ್ಷ ಡೋಸ್ ಗಳಷ್ಟು ಕೋವಿಶೀಲ್ಡ್ ಲಸಿಕೆಗಳು ರಾಜ್ಯದ ಬಳಿ ಲಭ್ಯವಿದೆ. 

ಇನ್ನು ಈಗ ಎರಡು ಡೋಸ್ ಗಳ ಲಸಿಕೆಯ ಅಂತರವನ್ನು 12-16 ವಾರಗಳಿಗೆ ಹೆಚ್ಚಿಸಿರುವುದರಿಂದ 1.68 ಲಕ್ಷ ಮಂದಿಗೆ ಕಾಯುವುದಕ್ಕೆ ಹೆಚ್ಚಿನ ಸಮಯ ಸಿಕ್ಕಂತಾಗಿದೆ. ಈ ಅಂಕಿ-ಅಂಶಗಳೇನೇ ಇರಲಿ, ತಜ್ಞರ ಪ್ರಕಾರ ರಾಜ್ಯ ಇನ್ನೂ 4.40 ಲಕ್ಷ ಮಂದಿಗೆ ತಕ್ಷಣವೇ ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಬೇಕಿದ್ದು, ಅವರೆಲ್ಲರೂ ನಾಲ್ಕು ವಾರಗಳನ್ನು ಪೂರ್ಣಗೊಳಿಸಿರುವುದರಿಂದ ಕಾಯುವಂತೆ ಹೇಳುವುದಕ್ಕೆ ಸಾಧ್ಯವಿಲ್ಲ ಮೈಕ್ರೋ ಪ್ಲಾನಿಂಗ್ ಯೋಜನೆಯಲ್ಲಿ ಸರ್ಕಾರ ಎಡವಿದೆ ಎಂದು ತಜ್ಞರು ಹೇಳಿದ್ದಾರೆ. 

SCROLL FOR NEXT