ರಾಜ್ಯ

ಲಾಕ್ಡೌನ್ ಎಫೆಕ್ಟ್: ರಾಜ್ಯದಲ್ಲಿ ಇಳಿಯುತ್ತಿರುವ ಕೊರೋನಾ ಸೋಂಕು, ಏರುತ್ತಿದೆ ಗುಣಮುಖರ ಪ್ರಮಾಣ!

Manjula VN

ಬೆಂಗಳೂರು: ರಾಜ್ಯದಲ್ಲಿ ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಹೊಸ ಕೋವಿಡ್ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದ್ದು, ತುಸು ನೆಮ್ಮದಿಯನ್ನು ತಂದಿದೆ. 

ಇದೇ ವೇಏಳೆ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಹೊಸ ಪ್ರಕರಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಆಶಾದಾಯಕವಾಗಿದೆ. ಏ.30ರಂದು 26,756 ಪ್ರಕರಣ ಬೆಂಗಳೂರಿನಲ್ಲಿ ದಾಖಳಾಗಿದ್ದವು. ಭಾನುವಾರ 8344 ಪ್ರಕರಣ ದೃಢಪಟ್ಟಿವೆ. ಆದರೆ, ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರಕರಣಗಳು ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿ ಮುಂದುವರೆದಿದೆ. 

ರಾಜ್ಯದ ದಿನದ ಸೋಂಕಿತರ ಪ್ರಮಾಣದಲ್ಲಿ ಬೆಂಗಳೂರಿನ ಪಾಲು ಶೇ.60ರ ಅಸುಪಾಸಿನಿಂದ ಶೇ.26ಕ್ಕೆ ಕುಸಿದಿದ್ದರೆ, ರಾಜ್ಯದ ಗ್ರಾಮೀಣ ಭಾಗಗಳ ಪಾಲು ಶೇ.40ರ ಅಸುಪಾಸಿನಿಂದ ಶೇ.74ಕ್ಕೆ ಜಿಗಿದಿರುವುದು ಅಪಾಯಕಾರಿ ಎನ್ನಲಾಗುತ್ತಿದೆ. 

ಅದೇ ರೀತಿ ಸುಮಾರು 20 ದಿನಗಳ ಬಳಿಕ ಒಟ್ಟಾರೆ 31 ಸಾವಿರದ ಆಸುಪಾಸಿನಲ್ಲಿ ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಭಾನುವಾರ 31,531 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಬರೋಬ್ಬರಿ 36,475 ಮಂದಿ ಗುಣಮುಖರಾಗಿದ್ದಾರೆ. ಇದೇ ವೇಳೆ ಕಳೆದ ಮೂರು ದಿನಗಳಿಂದ 300ರ ಗಡಿಯಲ್ಲಿದ್ದ ಮೃತರ ಸಂಖ್ಯೆ 403ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಗುಣಮುಖ ಪ್ರಮಾಣ ಏರಿಕೆಯಾಗುತ್ತಿದ್ದು, ಶೇ.71.13 ರಿಂದ 71.77ಕ್ಕೆ ತಲುಪಿದೆ. ಕಳೆದ ಮೇ.9 ರಂದು ಸೇ.69.84ರಷ್ಟಿತ್ತು. ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರಂಭಕ್ಕೂ ಮುನ್ನ ಜನವರಿ 30 ರಂದು ರಾಜ್ಯದಲ್ಲಿ ಗುಣಮುಖ ಪ್ರಮಾಣ ಸೇ.98.6ರಷ್ಟಿದ್ದು. 

ಮಾರ್ಚ್ 15 ರಿಂದ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಆರಂಭವಾಗಿತ್ತು. 8,860 ರಷ್ಟಿದ್ದ ಸಕ್ರಿಯ ಪ್ರಕರಣ ಇದೀಗ 6,00,147ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳಲ್ಲಿ ರಾಜ್ಯವು ಮಹಾರಾಷ್ಟ್ರ (4,68,109), ಕೇರಳ (4,40,649)ವನ್ನೂ ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ. 

SCROLL FOR NEXT