ಬೆಂಗಳೂರು: ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಪತ್ತು ಸಂಭವಿಸಿದಾಗ ತ್ವರಿತವಾಗಿ ಸ್ಪಂದಿಸುವ ಸಲುವಾಗಿ ರಾಜ್ಯದ 2 ಕಡೆ ವಿಪತ್ತು ಸ್ಪಂದನಾ ಪಡೆ (ಎಸ್'ಡಿಆರ್'ಎಫ್) ಕಚೇರಿಗಳನ್ನು ಆರಂಭಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ ಪೌರ ರಕ್ಷಣೆ, ಎಸ್'ಡಿಆರ್'ಎಫ್ ನಿರ್ದೇಶನಾಲಯ ಆಯೋಜಿಸಿದ್ದ ಕಾರ್ಯಕ್ರದಲ್ಲಿ ರೂ.20 ಕೋಟಿ ವೆಚ್ಚದ ಅತ್ಯಾಧುನಿಕ ರಕ್ಷಣಾ ಉಪಕರಣಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ರಾಜ್ಯದ ವಿಪತ್ತು ಸ್ಪಂದನಾ ಪಡೆ (ಎಸ್'ಡಿಆರ್'ಎಫ್) ಬಲವರ್ಧನೆಗೆ ರೂ.15 ಕೋಟಿ ವೆಚ್ಚದಲ್ಲಿ ಮತ್ತೆ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಎಸ್'ಡಿಆರ್'ಎಫ್ ಪಡೆಗೆ 100 ಮಂದಿ ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಸಕ್ತ ವರ್ಷ ಮತ್ತೆ ನೂರು ಜನ ನಿವೃತ್ತ ಯೋಧರ ನೇಮಕಕ್ಕೆ ಆದೇಶಿಸಲಾಗಿದೆ. ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಡುವೆ ಎಸ್'ಡಿಆರ್'ಎಫ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇತ್ತೀಚೆಗೆ ಬೆಳಗಾವಿಯಲ್ಲಿ ಪ್ರವಾಹ ಉಂಟಾದಾಗ ಎಸ್'ಡಿಆರ್'ಎಫ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿತು ಎಂದು ತಿಳಿಸಿದ್ದಾರೆ.
ಟೌಕ್ಟೇ ಚಂಡಮಾರುತಕ್ಕೆ ಉಡುಪಿ ಜಿಲ್ಲೆಯ 34 ಮನೆಗಳು ತುತ್ತಾಗಿವೆ. ಸುರತ್ಕಲ್ ಬಳಿ ಸಮುದ್ರದಲ್ಲಿ 8 ಜನ ಚಂಡಮಾರುತಕ್ಕೆ ಸಿಲುಕಿ ಕಾಣೆಯಾಗಿದ್ದರು. ಒಟ್ಟು 1 ಸಾವಿರ ಅನುಭವಿ ಸಿಬ್ಬಂದಿ ಚಂಡಮಾರುತ ಎದುರಿಸಲು ಸಜ್ಜಾಗಿದ್ದಾರೆ ಎಂದು ಮಾಹಿತಿ ನೀಡಿದರು.