ರಾಜ್ಯ

ಕಪ್ಪು ಶೀಲಿಂಧ್ರ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿ: ಸರ್ಕಾರಕ್ಕೆ ಕುಮಾರಸ್ವಾಮಿ ಒತ್ತಾಯ

Shilpa D

ಬೆಂಗಳೂರು: ಕಪ್ಪು ಶಿಲೀಂಧ್ರ ರೋಗವನ್ನು ಸರ್ಕಾರ ಕೂಡಲೇ ಸಾಂಕ್ರಾಮಿಕ ರೋಗ ಎಂದು ಘೋಷಿಸಬೇಕು. ಈ ಕಾಯಿಲೆಯ ಚಿಕಿತ್ಸೆಗೆ ಬೇಕಿರುವ ಔಷಧಗಳನ್ನು ಸಮರ್ಪಕವಾಗಿ ಸಂಗ್ರಹಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ' ಕಪ್ಪು ಶಿಲೀಂಧ್ರ ಸೋಂಕನ್ನು (ಮ್ಯೂಕರ್‌ ಮೈಕೊಸಿಸ್‌) ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಒಡಿಶಾ, ಗುಜರಾತ್‌, ಚಂಡೀಗಢದಲ್ಲಿ ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರವೂ ಇದನ್ನು ಸಾಂಕ್ರಾಮಿಕ ಎಂದು ಘೋಷಿಸುವಂತೆ ರಾಜ್ಯಗಳಿಗೆ ಸದ್ಯ ಹೇಳಿದೆ. ರಾಜ್ಯವೂ ಈ ಮಾರಕ ಕಾಯಿಲೆಯನ್ನು ಈ ಕೂಡಲೇ 'ಸಾಂಕ್ರಾಮಿಕ' ಎಂಬುದಾಗಿ ಘೋಷಿಸಬೇಕು' ಎಂದು ಹೇಳಿದ್ದಾರೆ. 

'ರೋಗದ ತಡೆಗಾಗಿ ತ್ವರಿತ, ಅಗತ್ಯ ಕ್ರಮ ಕೈಗೊಳ್ಳಲು, ಮುಂಚೂಣಿಯಲ್ಲಿ ಹೋರಾಡುವವರನ್ನು ರಕ್ಷಿಸಲು '1897ರ ಸಾಂಕ್ರಾಮಿಕ ರೋಗ ತಡೆ ಕಾಯಿದೆ'ಯನ್ನು ಕಪ್ಪು ಶಿಲೀಂಧ್ರ ರೋಗದ ವಿಚಾರದಲ್ಲಿ ಜಾರಿ ಮಾಡಲೇಬೇಕಾಗಿದೆ. ಕಪ್ಪು ಶಿಲೀಂಧ್ರ ರೋಗದಲ್ಲಿ ಸಾವಿನ ಸಾಧ್ಯತೆಗಳು ಹೆಚ್ಚಿವೆ. ಮಾರಕ, ಭಯಾನಕವೂ ಆಗಿರುವ ಈ ಕಾಯಿಲೆಯನ್ನು ಹಿಮ್ಮೆಟ್ಟಿಸಲೇಬೇಕಿದೆ' ಎಂದು ರಾಜ್ಯ ಸರ್ಕಾರಕ್ಕೆ ಎಚ್‌ಡಿಕೆ ಸಲಹೆ ನೀಡಿದ್ದಾರೆ.

ಸಾಂಕ್ರಾಮಿಕ ರೋಗಗಳ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ಆಲಸ್ಯ ಸರಿಯಲ್ಲ. ಕಪ್ಪು ಶಿಲೀಂಧ್ರ ರೋಗದ ನಿರ್ವಹಣೆಯಲ್ಲಿ ಸರ್ಕಾರ ಪದೇಪದೆ ಎಡವುತ್ತಿರುವುದು ಕಾಣಿಸುತ್ತಿದೆ. ರೋಗದ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ದಾಸ್ತಾನು ಹೊಂದದೇ ಇರುವುದು, ಅಗತ್ಯ ಪ್ರಮಾಣದ ಔಷಧವನ್ನು ಕೇಳಿ ಪಡೆದುಕೊಳ್ಳದೇ ಇರುವುದು ಇದಕ್ಕೆ ಸಾಕ್ಷಿ' ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಕೋವಿಡ್‌ನಿಂದ ಗುಣವಾದವರೇ ಹೆಚ್ಚಾಗಿ ಕಪ್ಪು ಶಿಲೀಂಧ್ರ ಕಾಯಿಲೆ ತುತ್ತಾಗುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಹಾಗಾದರೆ, ಕಪ್ಪು ಶಿಲೀಂಧ್ರದ ಸಂಭಾವ್ಯ ಅಪಾಯ ಕರ್ನಾಟಕಕ್ಕೆ ಹೆಚ್ಚು. ಕೋವಿಡ್‌ ಪ್ರಕರಣಗಳು ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿವೆ. ಅಂದರೆ, ಕಪ್ಪು  ಶಿಲೀಂಧ್ರ ರೋಗವೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ' ಎಂದು ಕುಮಾರಸ್ವಾಮಿ ಮುನ್ನೆಚ್ಚರಿಕೆ ನೀಡಿದ್ದಾರೆ.

SCROLL FOR NEXT