ರಾಜ್ಯ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಾಕ್ ಡೌನ್ ಕಠಿಣ ನಿಯಮ: ಖಾಕಿಪಡೆ ಹೈ ಅಲರ್ಟ್, ಹಲವರು ವಶಕ್ಕೆ

Sumana Upadhyaya

ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರ ಅಬ್ಬರವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ನ್ನು ನಿನ್ನೆ ವಿಸ್ತರಿಸಿ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿತು.

ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮನೆಯ ಹತ್ತಿರದ ಅಂಗಡಿಗಳಿಗೆ, ಸ್ಥಳಗಳಿಗೆ ನಾಗರಿಕರಿಗೆ ಅಗತ್ಯ ಕೆಲಸಗಳಿಗೆ ಹೋಗಲು ಮಾತ್ರ ಸರ್ಕಾರ ಅವಕಾಶ ನೀಡಿದ್ದು ಅನಗತ್ಯವಾಗಿ ರಸ್ತೆಯಲ್ಲಿ ನಡೆದುಕೊಂಡು, ವಾಹನಗಳಲ್ಲಿ ಓಡಾಡುವವರನ್ನು ವಶಕ್ಕೆ ಪಡೆದು ಕೇಸು ದಾಖಲಿಸಿ ಎಂದು ಪೊಲೀಸರಿಗೆ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ.

ಸರ್ಕಾರದ ಕಠಿಣ ಲಾಕ್ ಡೌನ್ ನಿಯಮ ಇಂದಿನಿಂದಲೇ ಜೂನ್ 7ರವರೆಗೆ ಜಾರಿಯಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಬೆಂಗಳೂರಿನ ಅಲ್ಲಲ್ಲಿ ಪೊಲೀಸರು ಕೇವಲ ಒಂದು ಗಂಟೆಯಲ್ಲಿ ಸುಮಾರು 50 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಾರಿ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಮಾತ್ರವಲ್ಲದೆ ಕೇಸು ಕೂಡ ಹಾಕುತ್ತಿದ್ದಾರೆ.

ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು ರಾಜಧಾನಿಯಲ್ಲಿ ಸಿವಿಲ್ ಮತ್ತು ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ತುರ್ತು ಸೇವೆ ಮತ್ತು ಅಗತ್ಯ ಸೇವೆ ಒದಗಿಸುವ ಐಡಿ ಕಾರ್ಡುಗಳನ್ನು ತೋರಿಸಿದರೆ ಮಾತ್ರ ಪೊಲೀಸರು ಹೋಗಲು ಬಿಡುತ್ತಿದ್ದಾರೆ. ಅಗತ್ಯ ಕೆಲಸಗಳಿಗೆ ಹೊರಗೆ ಹೋದವರು ಬೆಳಗ್ಗೆ 9.45ರೊಳಗೆ ಮನೆಗೆ ಹೋಗಬೇಕು ಎಂದು ಮುಖ್ಯಮಂತ್ರಿ ನಿನ್ನೆಯೇ ಹೇಳಿದ್ದರು. 10 ಗಂಟೆಯೊಳಗೆ ಮನೆಗೆ ಸೇರಿಕೊಳ್ಳಿ ಎಂದು ಪೊಲೀಸರು ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಕರೆ ನೀಡುತ್ತಿದ್ದಾರೆ.

ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ನಲ್ಲಿ ಯುವತಿಯರು ವಶಕ್ಕೆ: ಈ ಬಾರಿ ಮಹಿಳೆಯರ ಮೇಲೂ ಕೂಡ ಖಾಕಿಪಡೆ ಕಠಿಣ ನಿಯಮ ಕೈಗೊಳ್ಳುತ್ತಿದೆ. ದ್ವಿಚಕ್ರ ವಾಹನದಲ್ಲಿ ಅನಗತ್ಯವಾಗಿ ಬಂದಿದ್ದ ಯುವತಿಯರನ್ನು ಮಹಿಳಾ ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಹಲವರು ಪೊಲೀಸ್ ವಶಕ್ಕೆ: ಬೆಂಗಳೂರಿನ ಅಲ್ಲಲ್ಲಿ ಪೊಲೀಸರು ತಪಾಸಣೆ ನಡೆಸಿ ನಿಯಮ ಉಲ್ಲಂಘಿಸಿ ಅಂಗಡಿ ತೆರೆದವರಿಗೆ ದಂಡ ವಿಧಿಸಿ, ಲಾಠಿ ರುಚಿ ತೋರಿಸಿ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ.

ರಾಜ್ಯ ಸರ್ಕಾರ ನಿನ್ನೆ ಹೊರಡಿಸಿರುವ ಪರಿಷ್ಕೃತ ಕೊರೋನಾ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಅಂತಾರಾಜ್ಯ ಮತ್ತು ಅಂತರ ಜಿಲ್ಲಾ ಓಡಾಟಕ್ಕೆ ಷರತ್ತುಬದ್ಧ ಅವಕಾಶ ಕಲ್ಪಿಸಿದ್ದು, ಅನುಮತಿ ಪಡೆದವರು ಪ್ರಯಾಣಿಸಬಹುದು. ಸರಕು ಸಾಗಣೆ ವಾಹನಗಳಿಗೂ ಯಾವುದೇ ನಿರ್ಬಂಧವಿಲ್ಲ ಎಂದು ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರ ಬಿಗಿ ಕರ್ಫ್ಯೂ ಜಾರಿಗೊಳಿಸುವ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಕಠಿಣ ಕರ್ಫ್ಯೂ ನಿಯಮಗಳನ್ನು ಜಾರಿಗೊಳಿಸಬಹುದು ಎಂದು ಸರ್ಕಾರ ನಿನ್ನೆ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಿದೆ. 

SCROLL FOR NEXT