ರಾಜ್ಯ

ಕೋವಿಡ್ ಲಾಕ್ಡೌನ್: ಸಾಮಾನ್ಯ ಅಪರಾಧಗಳ ಇಳಿಕೆ, ಕೋವಿಡ್ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ!

Manjula VN

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸಾಮಾನ್ಯ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕೋವಿಡ್ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ.

ಹೌದು.. ಕೊರೋನಾ ಲಾಕ್ ಡೌನ್ ನಿಂದಾಗಿ ಪೊಲೀಸರಿಗೆ ಪ್ರತಿನಿತ್ಯ ತಲೆನೋವಾಗಿದ್ದ ಸಾಮಾನ್ಯ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕೊಲೆ, ದರೋಡೆ, ಸರಗಳ್ಳತನ, ಕಳ್ಳತನದಂತಹ ಸಾಮಾನ್ಯ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ಈ ಸಾಮಾನ್ಯ  ಅಪರಾಧ ಪ್ರಕರಣಗಳು ಇಳಿಕೆಯಾದ ತಕ್ಷಣ ಪೊಲೀಸರ ಶ್ರಮವೇನೂ ಕಡಿಮೆಯಾಗಿಲ್ಲ. ಬದಲಿಗೆ ಕೋವಿಡ್ ಸಾಂಕ್ರಾಮಿಕ ಅಕ್ರಮಗಳ ಸಂಖ್ಯೆ ಹೆಚ್ಚಾಗಿದೆ. 

ಅಕ್ರಮ ಬೆಡ್ ಬುಕ್ಕಿಂಗ್, ಬೆಡ್ ಬ್ಲಾಕಿಂಗ್, ರೆಮ್ಡೆಸಿವಿರ್ ಚುಚ್ಚುಮದ್ದುಗಳ ಕಾಳಸಂತೆ ಮಾರಾಟ, ನಕಲಿ ಔಷಧಿಗಳ ಮಾರಾಟದಂತಹ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲು ಅಸಹಾಯಕರಾಗಿರುವ ಜನರಿಂದ ಈ ಲೂಟಿಕೋರರು ಹೆಚ್ಚೆಚ್ಚು ಹಣ ಪಡೆದು ವಂಚಿಸುತ್ತಿದ್ದಾರೆ. ಇದೇ ಹಂತದಲ್ಲಿ ಸೈಬರ್ ಕ್ರೈಮ್ ಗಳ ಪರಿಶೀಲನೆ ಕೂಡ ತಗ್ಗಿ ಹೋಗಿದೆ.

ಇನ್ನು ಈ ಕುರಿತು ಮಾತನಾಡಿರುವ ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಳೆದ ವರ್ಷ ನಕಲಿ ಮತ್ತು ಕಳಪೆ ಗುಣಮಟ್ಟದ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗಳ ತಯಾರಿಕಾ ಮತ್ತು ವ್ಯಾಪಾರ ಘಟಕಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ವಸ್ತುಗಳನ್ನು ವಶಕ್ಕೆ ಪಡೆದಿದ್ದೆವು. ಆದರೆ ಈ 2ನೇ  ಅಲೆಯಲ್ಲಿ ಸಾಕಷ್ಟು ವೈದ್ಯಕೀಯ ಹಗರಣಗಳು ನಡೆಯುತ್ತಿವೆ. ಆದರೆ ಇಂತಹ ಹಗರಣಗಳನ್ನು ಬೇಧಿಸುವುದು ನಮಗೆ ದೊಡ್ಡ ಸವಾಲಾಗುವುದಿಲ್ಲ. ಕಾರಣ ಈ ಚಟುವಟಿಕೆಗಳನ್ನು ನಡೆಸುತ್ತಿರುವವರಲ್ಲಿ ಹೆಚ್ಚಿನವರು ಅಪರಾಧ ಜಗತ್ತಿಗೆ ಹೊಸಬರಾಗಿರುತ್ತಾರೆ ಹೇಳಿದ್ದಾರೆ.

ಪ್ರತಿದಿನ, ಪೊಲೀಸರು ರೆಮ್ಡೆಸಿವಿರ್ ಚುಚ್ಚುಮದ್ದಿನ ಬ್ಲ್ಯಾಕ್‌ಮಾರ್ಕೆಟಿಂಗ್‌ನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಜನರನ್ನು ಬಂಧಿಸುತ್ತಿದ್ದಾರೆ. ಅಲ್ಲದೆ ಆಮ್ಲಜನಕ ಸಿಲಿಂಡರ್‌ಗಳಿಗೆ ಅತಿಯಾದ ಬೆಲೆ ಬೇಡಿಕೆ, ಬೆಡ್-ಬ್ಲಾಕಿಂಗ್ ಹಗರಣದ ತನಿಖೆಯಲ್ಲಿ ಅಪಾರ ಸಂಖ್ಯೆಯ ಖಾಸಗಿ ಆಸ್ಪತ್ರೆಗಳು ವಂಚಕರೊಂದಿಗೆ ಕೈ  ಜೋಡಿಸಿವೆ ಎಂದು ತಿಳಿದುಬಂದಿದೆ. ಅಲ್ಲದೆ ನಕಲಿ ಕೋವಿಡ್-19 ನಕಾರಾತ್ಮಕ ಪ್ರಮಾಣಪತ್ರಗಳನ್ನು ನೀಡಿದ್ದಕ್ಕಾಗಿ ವೈದ್ಯರು ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ವೈದ್ಯರೊಬ್ಬರು ಮತ್ತು ಮಹಿಳೆಯೊಬ್ಬರ ಮನೆಯಲ್ಲಿ ‘ಖಾಸಗಿ ವ್ಯಾಕ್ಸಿನೇಷನ್ ಕಾರ್ಯಕ್ರಮ’ ನಡೆಸುತ್ತಿದ್ದಕ್ಕಾಗಿ  ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.
 

SCROLL FOR NEXT