ರಾಜ್ಯ

ಬಾಗಲಕೋಟೆ: ಹುಂಡಿ ಕಾಣಿಕೆ ವೈದ್ಯ ಎಂದೇ ಖ್ಯಾತರಾದ ಡಾ. ಅಶೋಕ ಸೊನ್ನದ ನಿಧನ

Raghavendra Adiga

ಬಾಗಲಕೋಟೆ: ಹುಂಡಿ ಕಾಣಿಕೆ ವೈದ್ಯರೆಂದು ಖ್ಯಾತವಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ವೈದ್ಯ ಡಾ. ಅಶೋಕ ರಾಮನ್ನ ಸೊನ್ನದ (83) ನಿಧನವಾಗಿದ್ದಾರೆ.

ಮುಧೋಳ ತಾಲ್ಲೂಕು ಭಂಟನೂರಿನ ಡಾ.ಅಶೋಕ ಸೊನ್ನದ, ಅಮೆರಿಕದ ಮಿಚಿಗನ್‌ ರಾಜ್ಯದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 38 ವರ್ಷಗಳ ಕಾಲ ತಜ್ಞ ವೈದ್ಯರಾಗಿ ಕೆಲಸ ಮಾಡಿ 2010ರಲ್ಲಿ ಭಾರತಕ್ಕೆ ಮರಳಿದ್ದರು ಆಗಿನಿಂದ ಹಳೆ ಬಾಗಲಕೋಟೆಯಲ್ಲಿ ತಾಯಿ ಪಾರ್ವತಿಬಾಯಿ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು.

ಇವರ ಮನೆಯಲ್ಲಿ ಏಳು ಜನ ಪಿ.ಎಚ್.ಡಿ. ಪದವೀಧರರಿದ್ದು ಡಾಕ್ಟರೇಟ್ ಕುಟುಂಬ ಎಂಬ ಗಿನ್ನಿಸ್ ದಾಖಲೆಯೂ ಇವರ ಕುಟುಂಬಕ್ಕಿದೆ.

ಭಂಟನೂರಿನ ರಾಮಪ್ಪ ಸೊನ್ನದ ಹಾಗೂ ಪಾರ್ವತಿ ಬಾಯಿ ದಂಪತಿಯ ಪುತ್ರ ಡಾ.ಅಶೋಕ ಬಾಗಲಕೋಟೆಯ ಸಕ್ರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 1965ರಲ್ಲಿ ಎಂಬಿಬಿಎಸ್ ಮುಗಿಸಿದ್ದರು. ನಂತರ ಅಹಮದಾಬಾದ್‌ನಲ್ಲಿ ಎಂ.ಡಿ. ಮುಗಿಸಿದ ಡಾ. ಅಶೋಕ್, 1972ರಲ್ಲಿ ಅಮೆರಿಕಗೆ ತೆರಳಿ ಅಲ್ಲಿಯೇ ನೆಲೆ ನಿಂತಿದ್ದರು. ಅಮೆರಿಕ ಪ್ರಜೆ ಐಲಿನ್‌ ಅವರನ್ನು ಮದುವೆಯಾಗಿದ್ದು, ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.

ಅಶೋಕ ಸೊನ್ನದ ಅವರ ಬಳಿ ಚಿಕಿತ್ಸೆ ಪಡೆಯಲು ಬಂದ ರೋಗಿಗಳಿಗೆ ಅವರ ಸೇವೆ ತೃಪ್ತಿಯಾದರೆ ಮಾತ್ರ ಕ್ಲಿನಿಕ್‌ನ ಪ್ರವೇಶ ದ್ವಾರದಲ್ಲಿ ಇಟ್ಟಿರುವ ಕಾಣಿಕೆ ಹುಂಡಿಗೆ ನಿಮ್ಮ ಕೈಲಾದಷ್ಟು ದುಡ್ಡು ಹಾಕಲು ಸೂಚಿಸುತ್ತಿದ್ದ ಕಾರಣ ಅವರು ಹುಂಡಿ ಕಾಣಿಕೆ ವೈದ್ಯ ಎಂದು ಜನಪ್ರಿಯವಾಗಿದ್ದರು.

ಅವರ ಜನಸೇವೆಗೆ ಮೆಚ್ಚಿ 2020ರಲ್ಲಿ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

SCROLL FOR NEXT