ರಾಜ್ಯ

ಕೋವ್ಯಾಕ್ಸಿನ್ ಲಸಿಕೆ ಕೊರತೆ: 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ನೀಡಿಕೆಗೆ ಮಾತ್ರ ಅವಕಾಶ

Srinivasamurthy VN

ನವದೆಹಲಿ: ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ತೀವ್ರ ಕೊರತೆಯುಂಟಾಗಿದ್ದು, ಪ್ರಸ್ತುತ ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದ ಕೋವಾಕ್ಸಿನ್ ದಾಸ್ತಾನು ಕೊರತೆಯನ್ನು ನೀಗಿಸುವ ಸಲುವಾಗಿ ಕರ್ನಾಟಕ ಸರ್ಕಾರ, ಕೋವಿಡ್ -19 ಲಸಿಕೆಯ ಎರಡನೇ ಡೋಸ್ ಅನ್ನು 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮಾತ್ರ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತು ಸೋಮವಾರ ಅಧಿಕೃತ ಆದೇಶದಲ್ಲಿ ರಾಜ್ಯ ಸರ್ಕಾರ, 'ಕರ್ನಾಟಕ ರಾಜ್ಯದಲ್ಲಿ ಕೋವಾಕ್ಸಿನ್ ಕೊರತೆಯ ಹಿನ್ನಲೆಯಲ್ಲಿ ಖಾಸಗಿ ಆರೋಗ್ಯ ಸಂಸ್ಥೆಗಳು ಲಭ್ಯವಿರುವ ಕೊವಾಕ್ಸಿನ್ ಸಂಗ್ರಹವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದೆ.

ಭಾರತ ಸರ್ಕಾರದ ಕೋವಿಡ್-19 ವ್ಯಾಕ್ಸಿನೇಷನ್ ವೇಳಾಪಟ್ಟಿಯ ಪ್ರಕಾರ ಕೋವಾಕ್ಸಿನ್‌ನ ಎರಡನೇ ಡೋಸ್‌ಗಾಗಿ ಕಾಯುತ್ತಿರುವ 45 ವರ್ಷದೊಳಗಿನವರಿಗೆ ಎರಡನೆಯ ಡೋಸ್‌ ಲಸಿಕೆ ನೀಡಲು ಮಾತ್ರ ಲಭ್ಯವಿರುವ ಲಸಿಕೆಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ. 

ಇನ್ನು ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 25,311 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 57,333 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಅಂತೆಯೇ 529 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 4,40,435. ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ  ಮಾಹಿಚಿ ನೀಡಿದೆ. 

ಬ್ಲಾಕ್ ಫಂಗಸ್ ಸೋಂಕಿತರ ಏರಿಕೆ
ಇನ್ನು ರಾಜ್ಯದಲ್ಲಿ ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಕರ್ನಾಟಕದಲ್ಲಿ ಇದುವರೆಗೆ 446 ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಂತೆಯೇ ಈ ವರೆಗೂ 12 ಮಂದಿ ಬ್ಲಾಕ್ ಫಂಗಸ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ಆರೋಗ್ಯ  ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ನಿನ್ನೆ ತಿಳಿಸಿದ್ದಾರೆ.

ಸಾವಿರಕ್ಕೂ ಹೆಚ್ಚು ಆಂಫೊಟೆರಿಸಿನ್-ಬಿ ವೈಯಲ್ಸ್ ಕರ್ನಾಟಕಕ್ಕೆ
ಇದರ ಬೆನ್ನಲ್ಲೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದ ಗೌಡ ಅವರು ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಬಳಸುವ ಔಷಧವಾದ ಆಂಫೊಟೆರಿಸಿನ್-ಬಿ ಯ 1,030 ಬಾಟಲುಗಳನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT