ರಾಜ್ಯ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿ ಕುಟುಂಬಸ್ಥರಿಗೆ ಸಿಸಿಬಿ ನೋಟಿಸ್

Lingaraj Badiger

ವಿಜಯಪುರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿ ಕುಟುಂಬಸ್ಥರಿಗೆ ಸಿಸಿಬಿ ಪೊಲೀಸರು ಮಂಗಳವಾರ ನೋಟಿಸ್ ನೀಡಿದ್ದಾರೆ.

ಮಗಳನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.

ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಸಿಡಿ ಯುವತಿ ಕುಟುಂಬಸ್ಥರು ಬೆಳಗಾವಿ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ನಂತರ  ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಹೀಗಾಗಿ ಜಿಲ್ಲೆಯ ನಿಡಗುಂದಿಯಲ್ಲಿರುವ ಯುವತಿ ಕುಟುಂಬಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಮೇ 21ರಂದು ಸಂತ್ರಸ್ತೆ ಕುಟುಂಬಸ್ಥರಿಗೆ ನೋಟಿಸ್ ನೀಡಲಾಗಿದೆ. ಸಿಸಿಬಿ ಅಧಿಕಾರಿ ವಿಜಯ್ ಕುಮಾರ್ ಅವರು ಯುವತಿ ಕುಟುಂಬಸ್ಥರಿಗೆ ನೋಟಿಸ್ ನೀಡಿದ್ದು, ಲಾಕ್​ಡೌನ್​ ಬಳಿಕ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

ಈ ಮಧ್ಯೆ, ರಾಸಲೀಲೆ ಪ್ರಕರಣದ ಆರೋಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ವಿಡಿಯೋದಲ್ಲಿರುವುದು ನಾನೇ ಎಂದು ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ.

SCROLL FOR NEXT