ರಾಜ್ಯ

ಬ್ಲ್ಯಾಕ್ ಫಂಗಸ್: ಹೊಸ ಡಿಸ್ಚಾರ್ಜ್ ಪ್ರೊಟೋಕಾಲ್ ಜಾರಿಗೆ ಸರ್ಕಾರ ನಿರ್ಧಾರ

Manjula VN

ಬೆಂಗಳೂರು: ಕೋವಿಡ್ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು, ಇದನ್ನು ತಡೆಯಲು ಹೊಸ ಡಿಸ್ಚಾರ್ಜ್ ಪ್ರೋಟೋಕಾಲ್ ಪಾಲನೆ ಮಾಡಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿರ್ದೇಶನ ನೀಡಿದ್ದಾರೆಂದು ತಿಳಿದುಬಂದಿದೆ. 

ಮಂಗಳವಾರ ಸಂಜೆ ತಮ್ಮ ನಿವಾಸದಲ್ಲಿ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು, ಕೋವಿಡ್ ಸೋಂಕಿತರಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಳ್ಳುತ್ತಿದ್ದು, ಇದನ್ನು ತಡೆಯಲು ಹೊಸ ಡಿಸ್ಚಾರ್ಜ್ ಪ್ರೋಟೋಕಾಲ್ ಪಾಲನೆ ಮಾಡಬೇಕು. ಬ್ಲ್ಯಾಕ್ ಫಂಗಸ್ ಕುರಿತಾಗಿ ವೈದ್ಯರ ಅನುಭವದ ಆಧಾರದ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಸೋಂಕಿತನ ಡಿಸ್ಚಾರ್ಜ್ ಮಾಡುವ ಮೊದಲು ರೋಗ ಬರುವುದನ್ನು ತಡೆಯಬೇಕು ಎಂದು ಸೂಚಿಸಿದ್ದಾರೆ. 

ಇದಕ್ಕಾಗಿ ಡಿಸ್ಚಾರ್ಜ್ ಪ್ರೋಟೋಕಾಲ್ ಮಾಡಿ ಅದರಂತೆ ಕ್ರಮ ಕೈಗೊಳ್ಳಬೇಕು. ಇಎನ್'ಟಿ ತಜ್ಞರ ಅಭಿಪ್ರಾಯದ ಜತೆ ಸೇರಿ ಡಿಸ್ಚಾರ್ಜ್ ಪ್ರೋಟೋಕಾಲ್ ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ. 

ಇದಲ್ಲದೆ, ಕೋವಿಡ್ ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಳ ಮೇಲೆ ನಿಗಾವಹಿಸುವಂತೆಯೂ ನಿರ್ದೇಶನ ನೀಡಿದ್ದಾರೆ. 

ಸೆಮಿಲಾಕ್ಡೌನ್ ನಿಂದಾಗಿ ನಗರದಲ್ಲಿ ಕೋವಿಡ್ ಪ್ರಕರಣ ಇಳಿಕೆಯಾಗುತ್ತಿದೆ. ಕಠಿಣ ಕ್ರಮಗಳಿಂದಾಗಿ ಸೋಂಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಇದೇ ರೀತಿಯಲ್ಲಿ ಕಠಿಣ ನಿಯಮಗಳನ್ನು ತಪ್ಪದೇ ಜಾರಿಗೆ ತರಬೇಕು. ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರ ನೀಡಿರುವುದರಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸೋಂಕಿನ ಪ್ರಮಾಣ ಮತ್ತಷ್ಟು ಇಳಿಕೆಯಾಗಲು ಜಿಲ್ಲೆಗಳಲ್ಲಿ ಕಠಿಣ ಕ್ರಮಗಳನ್ನು ಮುಂದುವರಿಸಬೇಕು. ಗ್ರಾಮಗಳಲ್ಲಿ ಹೋಂ ಐಸೋಲೇಷನ್ ರದ್ದುಪಡಿಸಿ, ಪ್ರತೀಯೊಬ್ಬ ಸೋಂಕಿತ ವ್ಯಕ್ತಿ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗುವಂತೆ ಮಾಡಬೇಕು. ಜನರ ಆರೋಗ್ಯದ ಹಿತದೃಷ್ಟಿಯಿಂದ ಕಠಿಣ ಕ್ರಮಗಳು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT