ರಾಜ್ಯ

ಮಂಗಳೂರು: ಕಳ್ಳನ ಹೊಟ್ಟೆಯಲ್ಲಿ 35 ಗ್ರಾಂ ಚಿನ್ನ ಪತ್ತೆ!

Manjula VN

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಭರಣ ಮಳಿಗೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದ ಆರೋಪಿಯ ಹೊಟ್ಟೆಯಲ್ಲಿ 35 ಗ್ರಾಂ ಚಿನ್ನ ಪತ್ತೆಯಾಗಿದೆ. 

ಸುಳ್ಯ ಮತ್ತು ಪುತ್ತೂರಿನಲ್ಲಿ ಚಿನ್ನ ಕಳವು ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು ತಂಗಚ್ಚನ್ ಮತ್ತು ಶಿಬು ಎಂಬವರನ್ನು ಬಂಧಿಸಿದ್ದರು. ಇದರಲ್ಲಿ ಶಿಬು ಎಂಬಾತನಿಗೆ ಮೇ.29ರಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಎಕ್ಸರೇ ತೆಗೆಸಿದಾಗ ಆತನ ಹೊಟ್ಟೆಯಲ್ಲಿ ಚಿನ್ನಾಭರಣ ಇರುವುದು ಕಂಡು ಬಂದಿದೆ.

ಇದರಂತೆ ಆರೋಪಿಗೆ ಮೇ.30 ರಂದು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಆರೋಪಿಯ ಹೊಟ್ಟೆಯಿಂದ 35 ಗ್ರಾಂ ಚಿನ್ನಾಭರಣವನ್ನು ಹೊರ ತೆಗೆದಿದ್ದಾರೆ. ಉಂಗುರ, ಕಿವಿಯೋಲೆ ಸೇರಿದಂತೆ ಒಟ್ಟು 30ಕ್ಕೂ ಅಧಿಕ ಆಭರಣಗಳನ್ನು ಹೊರ ತೆಗೆಯಲಾಗಿದೆ. 

ಆಭರಣ ಮಳಿಗೆಯಿಂದ ಆಭರಣ ಕದಿಯುತ್ತಿದ್ದ ಆರೋಪಿ, ಯಾರ ಕೈಗೂ ಸಿಕ್ಕಿಹಾಕಿಕೊಳ್ಳಬಾರದು ಎಂಬ ಕಾರಣಕ್ಕೆ ನುಂಗಿದ್ದಾನೆ. ಇಬ್ಬರೂ ಆರೋಪಿಗಳು ಸಾಕಷ್ಟು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಣ್ಣೂರಿನ ಜೈಲಿನಲ್ಲಿ ಸಾಕಷ್ಟು ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ. ಇದೀಗ ಆರೋಪಿಗಳಿಂದ 147 ಗ್ರಾಮ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಕಳ್ಳರು ಚಿನ್ನವನ್ನು ನುಂಗುತ್ತಿದ್ದಾರೆಂಬುದನ್ನು ಕೇಳಿದ್ದೆವು. ಆದರೆ, ಈ ಪ್ರಕರಣದಿಂದ ನಿಜವಾಗಿಯೂ ನೋಡಿದಂತಾಗಿದೆ. ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದೇವೆಂದು ತಿಳಿಸಿದ್ದಾರೆ. 

ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿದಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

SCROLL FOR NEXT