ರಾಜ್ಯ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆ: ಚೇತರಿಕೆ ಪ್ರಮಾಣದಲ್ಲಿ ಏರಿಕೆ

Manjula VN

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 20,378 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, 28,053 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರಿಗಿಂತಲೂ ಗುಣಮುಖರಾಗುತ್ತಿರುವ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಕೊರೋನಾ ಅಬ್ಬರ ಇಳಿಕೆಯಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. 

ರಾಜ್ಯದಲ್ಲಿ ಮೇ.5 ರಂದು 52,112 ಕೇಸ್ ಪತ್ತೆಯಾಗಿತ್ತು. ಇದೀ ಸಾರ್ವಕಾಲಿಕ ಗರಿಷ್ಠವಾಗಿತ್ತು. ಬಳಿಕ ಮೇ.6 ರಂದು 49,058 ಮತ್ತು ಮೇ.7 ರಂದು 48,781 ಪ್ರಕರಣಗಳು ಪತ್ತೆಯಾಗಿದ್ದವು. ದಿನಕಳೆದಂತೆ ಈ ಸಂಖ್ಯೆ ಇಳಿಕೆಯಾಗುತ್ತಲೇ ಬಂದಿದ್ದು, ಇದೀಗ 20,378ಕ್ಕೆ ತಲುಪಿದೆ. 

ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 25,87,827ಕ್ಕೆ ಏರಿಕೆಯಾಗಿದ್ದು, ಏಪ್ರಿಲ್ 5ರಿಂದಲೂ ರಾಜ್ಯದಲ್ಲಿ ಪಾಸಿಟಿವಿಟಿ ದರ ಏರಿಕೆಯಾಗುತ್ತಲೇ ಬಂದಿದೆ. ರಾಜ್ಯದಲ್ಲಿ ಇದೀಗ ಪಾಸಿಟಿವಿಟಿ ಪ್ರಮಾಣ ಶೇ.8.71ಕ್ಕೆ ಏರಿಕೆಯಾಗಿದೆ. 

ಇನ್ನು ಬೆಂಗಳೂರು ನಗರ ಒಂದರಲ್ಲಿಯೇ ನಿನ್ನೆ 4,734 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,59,237ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಕ್ರಮೇಣ ಇಳಿಕೆಯಾಗುತ್ತಲೇ ಇದ್ದು, 3,42,010ಕ್ಕೆ ಇಳಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ 1,62,625 ತಲುಪಿದೆ. 

ರಾಜ್ಯದಲ್ಲಿ ಏಪ್ರಿಲ್ 26 ರಿಂದಲೂ ಗುಣಮುಖರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಮೇ 30ರಂದು ಒಂದೇ ದಿನ 28,053 ಮಂದಿ ಚೇತರಿಸಿಕೊಂಡಿದ್ದಾರೆ, ಇದರೊಂದಿಗೆ ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಶೇಕಡಾ 85.67ಕ್ಕೆ ಏರಿಕೆಯಾಗಿದೆ. 

ಇನ್ನು ಏಪ್ರಿಲ್ 5 ರಿಂದಲೂ ಏರಿಕೆಯಾಗುತ್ತಲೇ ಇದ್ದ ಮರಣ ಪ್ರಮಾಣ ಹಲವು ದಿನಗಳ ಬಳಿಕ ಇಳಿಕೆಯಾಗಿರುವುದು ಕಂಡು ಬಂದಿದೆ. ರಾಜ್ಯದಲ್ಲಿ ಮರಣ ಪ್ರಮಾಣ ಶೇ.1.10ಕ್ಕೆ ಕುಸಿದಿದ್ದು, ಈ ವರೆಗಿನ ಮೃತರ ಸಂಖ್ಯೆ 28,679ಕ್ಕೆ ತಲುಪಿದೆ. ಇನ್ನು ಬೆಂಗಳೂರಿನಲ್ಲಿ ನಿನ್ನೆ 213 ಮಂದಿ ಸಾವನ್ನಪ್ಪಿದ್ದು, ಮರಣ ಪ್ರಮಾಣ ಸೇ.1.13ಕ್ಕೆ ತಲುಪಿದೆ. 

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಲಾಕ್ಡೌನ್ ನಿಂದಾದ ಪ್ರಯೋಜನವನ್ನು ಜನರು ನೋಡುತ್ತಿದ್ದಾರೆ. ಲಾಕ್ಡೌನ್ ವಿಸ್ತರಣೆ ಮಾಡುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಿದ್ದಾರೆಂದು ಹೇಳಿದ್ದಾರೆ. 

SCROLL FOR NEXT