ರಾಜ್ಯ

ಸಂಸದರಿಗೆ ಲೆಕ್ಕ ಒಪ್ಪಿಸಿದ ಡಿಸಿ; ಮೈಸೂರಿಗೆ ಬಂದಾಗಿನಿಂದಲೇ ನಾನು ಟಾರ್ಗೆಟ್: ರೋಹಿಣಿ ಸಿಂಧೂರಿ

Shilpa D

ಮೈಸೂರು: ಸಂಸದ ಪ್ರತಾಪ ಸಿಂಹ ಅವರು ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಲೆಕ್ಕಪತ್ರವನ್ನು ಬಿಡುಗಡೆ ಮಾಡಿದ್ದಾರೆ. 

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ, ರಾಜ್ಯ ಸರ್ಕಾರದಿಂದ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಬಂದಿರುವ 41 ಕೋಟಿ ರೂ. ಅನುದಾನದಲ್ಲಿ ಏನೆಲ್ಲಾ ಖರ್ಚು ವೆಚ್ಚವಾಗಿದೆ ಎಂಬುದನ್ನು ವಿವರಿಸಿದ್ದಾರೆ. ಈ ಎಲ್ಲಾ ಖರ್ಚುಗಳನ್ನು ಸಿಎಜಿ ಸರಿಯಾದ ಸಮಯದಲ್ಲಿ ಲೆಕ್ಕ ಪರಿಶೋಧನೆಗೆ ಒಳಪಡಿಸುತ್ತದೆ. ಎಲ್ಲವೂ ಸರಕಾರದ ಮಾರ್ಗಸೂಚಿಯಂತೆ ನಡೆದಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯಾಗಿ ಮೈಸೂರಿಗೆ ಬಂದ ದಿನದಿಂದಲೂ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ. ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದೆ ಕೊರೋನಾ ನಿಯಂತ್ರಣಕ್ಕೆ ಸಂಪೂರ್ಣ ಶಕ್ತಿಯನ್ನು ವ್ಯಯಿಸುತ್ತೇನೆ ಎಂದು ಹೇಳಿದ್ದಾರೆ.

ಕೊರೊನಾದಂತಹ ಪಿಡುಗು ನಮ್ಮನ್ನು ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲೂ ನನ್ನ ಮೇಲೆ ಸುಳ್ಳುಗಳನ್ನು ಹೊರಿಸಿ ಬೇಜವಾಬ್ದಾರಿ ಹೇಳಿಕೆಗಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ನೀಡುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿ, ಆತ್ಮವಿಶ್ವಾಸ ಕುಂದುವಂತೆ ಮಾಡಬಹುದು. ಜನರಿಗೆ ಜಿಲ್ಲಾಡಳಿತ ಭರವಸೆ ನೀಡುವ ಕೆಲಸ ಮಾಡಲಿದೆ. ಕೊರೋನಾ ನಿಯಂತ್ರಿಸಲು ಜಿಲ್ಲಾಡಳಿ ತದ ಪ್ರತಿಯೊಬ್ಬರೂ 24 ಗಂಟೆ ಅವಿರತ ಶ್ರಮ ವಹಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ ಹಾಕಿದ ಜಿಲ್ಲೆ ಮೈಸೂರು. ಇತರ ಜಿಲ್ಲೆಗೆ ಹೋಲಿಸಿದರೆ ಮರಣ ಪ್ರಮಾಣ ಮೈಸೂರಿನಲ್ಲಿ ಕಡಿಮೆ ಇದೆ. ಟೆಸ್ಟಿಂಗ್‌ನಲ್ಲಿ ರಾಜ್ಯ ನೀಡಿದ ಗುರಿಯಲ್ಲಿ ಶೇ. 150ರಷ್ಟು ಪೂರೈಸಲಾಗಿದೆ. 2020ರಲ್ಲೇ ಗಣಕೀಕೃತ ಬೆಡ್‌ ವ್ಯವಸ್ಥೆಯನ್ನು ಮೈಸೂರು ಜಿಲ್ಲೆ ಪ್ರಾರಂಭಿಸಿದ್ದರಿಂದ ಎರಡನೇ ಅಲೆ ಬಂದಾಗ ಸಾಕಷ್ಟು ನೆರವಾಯಿತು. ರಾಜ್ಯಕ್ಕೆ ಮಾದರಿಯಾಗುವಂತೆ 'ಕೋವಿಡ್‌ ಮಿತ್ರ' ತೆರೆಯಲಾಗಿದೆ. ಇದರಿಂದ 30 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಮೆಡಿಕಲ್‌ ಕನ್ಸಲ್‌ಟೆನ್ಸಿ ದೊರೆತಿದೆ ಎಂದು ವಿವರಿಸಿದ್ದಾರೆ.
 

SCROLL FOR NEXT