ರಾಜ್ಯ

ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗಕ್ಕೆ ಚಿಂತನೆ: ಸಚಿವ ಸುನೀಲ್ ಕುಮಾರ್

Shilpa D

ಉಡುಪಿ: ರಾಜ್ಯದಲ್ಲಿರುವ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ನಿರ್ದಿಷ್ಟ ಉದ್ಯೋಗ ಮೀಸಲಾತಿ ನೀಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಉಡುಪಿ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ 66 ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಸಂದೇಶ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬುವುದು ರಾಜ್ಯ ಸರ್ಕಾರದ ಚಿಂತನೆ. ಜಾಗತೀಕರಣ ಹಾಗೂ ಐಟಿ, ಬಿಟಿ ಕಂಪನಿಗಳಿಂದಾಗಿ ಸ್ಥಿತಿಯಲ್ಲಿ ಬದಲಾವಣೆ ಆಗಿದೆ. ಹೀಗಾಗಿ ಕನ್ನಡಿಗರಿಗೆ ಉದ್ಯೋಗ ಕಡ್ಡಾಯ ಮಾಡಲಾಗುತ್ತಿಲ್ಲ‌. ಈ‌ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯಲ್ಲಿ ಮಾರ್ಪಡು ಮಾಡಲಾಗುತ್ತದೆ ಎಂದರು.

ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿ ಏಕರೂಪತೆ ನೀಡಲು ಸುತ್ತೋಲೆ ಹೊಡಿಸಲಾಗುವುದೆಂದರು. ಈ ಬಾರಿಯ ರಾಜ್ಯ ಪ್ರಶಸ್ತಿಗಳಿಗೆ ಅರ್ಹರನ್ನು ಹುಡುಕಿಕೊಂಡು ಹೋಗಿ ನೀಡಲಾಗಿದೆ. ಸಾಧಕರನ್ನು ಗುರುತಿಸಲು ಈವರೆಗೆ ಅನುಸರಿಸುತ್ತಿದ್ದ ಕ್ರಮ ಬಿಟ್ಟು ತೆರೆಮರೆ ಪ್ರತಿಭೆಗಳನ್ನು ಗುರುತಿಸಲಾಗಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಕೊಡಲಾಗಲಿಲ್ಲ. ಆದರೆ, ಆಯ್ಕೆ‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದ್ದು, ಪ್ರಶಸ್ತಿಗಳೇ ಸಾಧಕರನ್ನು ಹುಡುಕಿಕೊಂಡು ಹೋಗಿವೆ. ಪ್ರಭಾವ, ಒತ್ತಡಕ್ಕೆ ಮಣಿಯದೆ ಎಲೆಮರೆಕಾಯಿಯಂತಿದ್ದ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದರು.

ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವ ವಿಚಾರದಲ್ಲಿ ನಿರ್ಧಿಷ್ಟ ನಿಯಮಾವಳಿ ಇಲ್ಲ. ಮುಂದೆ, ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಹಂಚಿಕೆಯಲ್ಲಿ ಏಕರೂಪದ ನಿಯಮಾವಳಿ ಜಾರಿಗೆ ತರಲಾಗುವುದು ಎಂದರು.

SCROLL FOR NEXT