ರಾಜ್ಯ

ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ 4,779 ಅರ್ಹ ಮಂದಿ

Srinivas Rao BV

ಮೈಸೂರು: ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ 4,779 ಅರ್ಹ ವ್ಯಕ್ತಿಗಳಿದ್ದಾರೆ ಎಂದು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ನ್ನು ನಡೆಸಲು ನೋಡಲ್ ಅಧಿಕಾರ ಹೊಂದಿರುವ ಮೈಸೂರು ವಿಶ್ವವಿದ್ಯಾಲಯ ಹೇಳಿದೆ. 

ಮೈಸೂರು ವಿವಿಯ ಉಪಕುಲಪತಿಗಳಾದ ಜಿ ಹೇಮಂತ ಕುಮಾರ್ ಅವರು ಮಂಗಳವಾರದಂದು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಯುಜಿಸಿ ಮಾರ್ಗಸೂಚಿಯ ಪ್ರಕಾರ ಮಾಡರೇಶನ್ ಮತ್ತು ಸ್ಕ್ರೀನಿಂಗ್ ಸಮಿತಿಯ ಸಭೆ ನಡೆಸಿ ಕನಿಷ್ಟ ಅಂಕಗಳ ಅರ್ಹತೆ (cut-off marks) ನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ. 

41 ವಿಷಯಗಳಿಗೆ 11 ನೋಡಲ್ ಕೇಂದ್ರಗಳಲ್ಲಿ ಜು.25 ರಂದು ಪರೀಕ್ಷೆಗಳು ನಡೆದಿತ್ತು. 83,907  ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದರು. ಆದರೆ 69,857 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಶೇ. 6.84 ರಷ್ಟು ಅಂದರೆ 4,779 ಮಂದಿ ಮಾತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆದಿದ್ದಾರೆ. 

2,470 ಪುರುಷ ಅಭ್ಯರ್ಥಿಗಳಿದ್ದರೆ, 2,309 ಮಂದಿ ಮಹಿಳಾ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಮೈಸೂರು ಕೇಂದ್ರ 1,059 ಅಭ್ಯರ್ಥಿಗಳೊಂದಿಗೆ ಅಗ್ರಶ್ರೇಣಿಯಲ್ಲಿದೆ. ನಂತರದ ಸ್ಥಾನದಲ್ಲಿ 985 ಅಭ್ಯರ್ಥಿಗಳು ಬೆಂಗಳೂರು ಕೇಂದ್ರದವರಾಗಿದ್ದಾರೆ. 

ಫೆಬ್ರವರಿ-ಮಾರ್ಚ್ ನಲ್ಲಿ ಮುಂದಿನ ಕೆ-ಸೆಟ್

ಮುಂದಿನ ಕೆ-ಸೆಟ್ ಪರೀಕ್ಷೆಯನ್ನು ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ಕೆ-ಸೆಟ್ ಪರೀಕ್ಷೆಯ ಸಂಯೋಜಕರಾದ ಪ್ರೊಫೆಸರ್ ಹೆಚ್ ರಾಜಶೇಖರ್ ಹೇಳಿದ್ದಾರೆ. 

SCROLL FOR NEXT