ರಾಜ್ಯ

ಬೆಂಗಳೂರು: ಯಮಲೂರಿನಲ್ಲಿ ಕಲುಷಿತ ನೀರು ಕುಡಿದು 200 ಮಕ್ಕಳು ಅಸ್ವಸ್ಥ

Lingaraj Badiger

ಬೆಂಗಳೂರು: ಯಮಲೂರಿನ ಅಪಾರ್ಟ್‌ಮೆಂಟ್‌ನಲ್ಲಿ ಕಲುಷಿತ ನೀರು ಕುಡಿದು ಒಂದು ವರ್ಷದೊಳಗಿನ ಮಕ್ಕಳು ಸೇರಿದಂತೆ ಸುಮಾರು 200 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಬಿಲ್ಡರ್ ಪ್ರೆಸ್ಟೀಜ್ ಗ್ರೂಪ್ ತಮ್ಮ ಕುಂದುಕೊರತೆಗಳನ್ನು ಕೂಡಲೇ ಪರಿಹರಿಸಬೇಕೆಂದು ಪ್ರೆಸ್ಟೀಜ್ ಕ್ಯೂ ಗಾರ್ಡನ್ಸ್ ಅಪಾರ್ಟ್‌ಮೆಂಟ್ ನಿವಾಸಿಗಳು ಒತ್ತಾಯಿಸಿದ್ದಾರೆ.

ಸುತ್ತಮುತ್ತಲಿನ ಅನೇಕ ಅಪಾರ್ಟ್ ಮೆಂಟ್ ಸಂಕೀರ್ಣಗಳಲ್ಲಿ ಅಂತರ್ಜಲ ಕಲುಷಿತಗೊಂಡಿರುವುದು ಅತ್ಯಂತ ಆತಂಕಕಾರಿಯಾಗಿದೆ ಎಂದು ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸುತ್ತಮುತ್ತಲಿನ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹೇಳಿವೆ.

ಅಕ್ಟೋಬರ್ 22 ರಂದು ಸುಮಾರು 100 ಮಕ್ಕಳು ಮತ್ತು ವಯಸ್ಕರಲ್ಲಿ ಹೊಟ್ಟೆ ನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಂಡು ಅನಾರೋಗ್ಯಕ್ಕೆ ಒಳಗಾದ ನಂತರ ಈ ವಿಷಯ ಬೆಳಕಿಗೆ ಬಂದಿತು. ಅಕ್ಟೋಬರ್ 23ರ ಹೊತ್ತಿಗೆ ಸುಮಾರು 200ಕ್ಕೆ ಹೆಚ್ಚು ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಪ್ರೆಸ್ಟೀಜ್ ಕ್ಯೂ ನಿವಾಸಿ ಮನೀಶ್ ಸಿಂಗ್ ಅವರು ತಿಳಿಸಿದ್ದಾರೆ.

"ನಾವು ಟ್ಯಾಂಕರ್‌ಗಳಿಂದ ನೀರನ್ನು ಪಡೆಯುತ್ತೇವೆ ಮತ್ತು ನಾವು ಸಂಕೀರ್ಣದಲ್ಲಿ ನಾಲ್ಕು ಬೋರ್‌ವೆಲ್‌ಗಳನ್ನು ಹೊಂದಿದ್ದೇವೆ. ನಾವೂ ಕೂಡ ಕಾವೇರಿ ನೀರಿನ ಮೇಲೆ ಸ್ವಲ್ಪ ಅವಲಂಬಿತರಾಗಿದ್ದೇವೆ. ಹೆಚ್ಚಿನ ನಿವಾಸಿಗಳು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದ್ದರಿಂದ, ಬಿಲ್ಡರ್‌ಗೆ ಈ ಬಗ್ಗೆ ತಿಳಿಸಲಾಯಿತು ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಯಿತು. ಆರಂಭದಲ್ಲಿ ನೀರಿನಲ್ಲಿ ಯಾವುದೇ ಮಾಲಿನ್ಯವಿಲ್ಲ ಎಂದು ಅವರು ಹೇಳಿದರು. ಆದರೆ ನಾವು ಖಾಸಗಿ ಲ್ಯಾಬ್‌ಗಳಲ್ಲಿ ನೀರಿನ ಮಾದರಿಗಳನ್ನು ಪರೀಕ್ಷಿಸಿದಾಗ, ನೀರು ಕಲುಷಿತಗೊಂಡಿರುವುದು ನಮಗೆ ತಿಳಿಯಿತು” ಎಂದು ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ, 950 ಫ್ಲಾಟ್‌ಗಳನ್ನು ಹೊಂದಿರುವ ಈ ಸಂಕೀರ್ಣದಲ್ಲಿ 300 ನಿವಾಸಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಟ್ಯಾಂಕರ್‌, ಬೋರ್‌ವೆಲ್‌ ನೀರು ಬಳಸುವುದನ್ನು ನಿಲ್ಲಿಸಿ, ಕ್ಯಾನ್‌ ನೀರನ್ನು ಖರೀದಿಸಿ ಬಳಕೆ ಮಾಡುತ್ತಿದ್ದಾರೆ. 

ಕಳೆದ 15 ದಿನಗಳಿಂದ 20-50 ವರ್ಷ ವಯಸ್ಸಿನ ರೋಗಿಗಳಲ್ಲಿ ಮತ್ತು ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಸಕ್ರ ವರ್ಲ್ಡ್ ಹಾಸ್ಪಿಟಲ್‌ನ ಆಂತರಿಕ ಔಷಧ ಮತ್ತು ಮಧುಮೇಹ ಹಿರಿಯ ಸಲಹೆಗಾರ್ತಿ ಡಾ ಸುಬ್ರತಾ ದಾಸ್ ಅವರು ಹೇಳಿದ್ದಾರೆ.

ಭಾರೀ ಮಳೆಯ ನಂತರ ಕುಡಿಯುವ ನೀರಿಗೆ ಎಸ್‌ಟಿಪಿ ನೀರು ಮಿಶ್ರಣಗೊಂಡಿದ್ದರಿಂದ ಕಲುಷಿತವಾಗಿದೆ ಎಂದು ಪ್ರೆಸ್ಟೀಜ್ ಗ್ರೂಪ್ ನಿವಾಸಿಗಳಿಗೆ ಬುಧವಾರ ತಿಳಿಸಿದೆ ಎಂದು ಇನ್ನೊಬ್ಬ ನಿವಾಸಿ ಸಾಯಿ ಕೃಷ್ಣನ್ ಅವರು ಹೇಳಿದ್ದಾರೆ.

SCROLL FOR NEXT