ರಾಜ್ಯ

ನ.6ರಂದು ಸಿಎಂ ಬೊಮ್ಮಾಯಿ ದೆಹಲಿಗೆ: ಉಪಚುನಾವಣೆ ಫಲಿತಾಂಶ ಕುರಿತು ಹೈಕಮಾಂಡ್'ಗೆ ಮಾಹಿತಿ

Manjula VN

ಬೆಂಗಳೂರು: ದೀಪಾವಳಿ ಬಳಿಕ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನವೆಂಬರ್ 6 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಷ್ಟ್ರ ರಾಜಧಾನಿ ನವದಹಲಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಉಪ ಚುನಾವಣೆಯ ಫಲಿತಾಂಶ ಕುರಿತು ಪಕ್ಷದ ವರಿಷ್ಠರಿಗೆ ವಿವರಿಸಲಿದ್ದಾರೆಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬರದ ಕಾರಣ ಬಿಜೆಪಿ ದೆಹಲಿ ವರಿಷ್ಠರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿ ವ್ಯಾಪ್ತಿಗೆ ಬರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಬಗ್ಗೆ ಪಕ್ಷದ ಉನ್ನತ ನಾಯಕತ್ವ ಅಸಮಾಧಾನಗೊಂಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಹೀಗಾಗಿ ಬೊಮ್ಮಾಯಿಯವರು ಹಾನಗಲ್ ಸೋಲಿಗೆ ಕಾರಣಗಳನ್ನು ವರಿಷ್ಠರಿಗೆ ವಿವರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಜುಲೈ 26 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನವದೆಹಲಿಗೆ ಭೇಟಿ ನೀಡುತ್ತಿರುವುದು ಇದು 5ನೇ ಬಾರಿಯಾಗಿದೆ. ಈ ನಡುವೆ ಮುಖ್ಯಮಂತ್ರಿಯಾಗಿ ಬೊಮ್ಮಾಯಿಯವರು ಗುರುವಾರ ಮೊದಲ ನೂರು ದಿನಗಳನ್ನು ಪೂರೈಸುತ್ತಿದ್ದು, ದೆಹಲಿ ಭೇಟಿ ವೇಳೆ ಬೊಮ್ಮಾಯಿಯವರು 100 ದಿನಗಳ ಆಡಳಿತ ಪ್ರಗತಿ ಕಾರ್ಯಗಳ ಕುರಿತು ವರಿಷ್ಠರಿಗೆ ವರದಿ ನೀಡಲಿದ್ದಾರೆಂದು ತಿಳಿದುಬಂದಿದೆ.

ಕಾರ್ಯಕಾರಿಣಿ ಸಭೆಯಲ್ಲಿ ಕೇವಲ ಬೊಮ್ಮಾಯಿ ಮಾತ್ರವಷ್ಟೇ ಅಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೂಡ ಭಾಗವಹಿಸಲಿದ್ದಾರೆ.

ಪಕ್ಷವು ನವೆಂಬರ್ 8 ರಿಂದ ಬೆಂಗಳೂರಿನಲ್ಲಿ ಪರಿಶೀಲನಾ ಸಭೆಯನ್ನು ನಡೆಸಲಿದ್ದು, ಈ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರು ಪಕ್ಷದ ಪದಾಧಿಕಾರಿಗಳನ್ನು ಭೇಟಿ ಮಾಡಿ ಉಪಚುನಾವಣೆ ಫಲಿತಾಂಶಗಳನ್ನು ಪರಿಶೀಲಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

SCROLL FOR NEXT