ರಾಜ್ಯ

ದಿಢೀರ್ ಸುರಿದ ಧಾರಾಕಾರ ಮಳೆಗೆ ತತ್ತರಿಸಿದ ಬೆಂಗಳೂರು, ಹಲವು ಪ್ರದೇಶ ಜಲಾವೃತ

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿಢೀರ್ ಸುರಿದ ಮಳೆಯಿಂದಾಗಿ ಜನರು, ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ.

ಕೆಲ ದಿನಗಳ ಕಾಲ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೆ ಆರ್ಭಟಿಸಿದ್ದು, ನಗರದ ಹಲವೆಡೆ ಭಾರಿ ಮಳೆಯಾಗಿದೆ.  ನಗರದ ಶ್ರೀನಗರ, ಹನುಮಂತನಗರ, ಗಾಂಧಿ ಬಜಾರ್, ಚಾಮರಾಜಪೇಟೆ, ಬಸವನಗುಡಿ, ಗಿರಿನಗರ ಸೇರಿದಂತೆ, ವಿಧಾನಸೌಧ, ಶಿವಾಜಿನಗರ, ಕೆಆರ್ ಮಾರ್ಕೆಟ್ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ.

ಇತ್ತ ಜಯನಗರದ ಆಶೋಕ ಪಿಲ್ಲರ್, ಸೌಥೆಂಡ್ ಸರ್ಕಲ್, ಜೆಪಿನಗರ, ಜೆಜೆ ನಗರ ಸುತ್ತಮುತ್ತ ಕೂಡ ಭಾರೀ ಮಳೆಯಾಗಿದೆ. ಏಕಾಏಕಿ ಮಳೆ ಬಂದ ಪರಿಣಾಮ ವಾಹನ ಸವಾರರು ಕೆಲ ಕಾಲ ಪರದಾಟ ಅನುಭವಿಸಿದರು. ಜೆಜೆನಗರ ಮತ್ತು ಚಾಮರಾಜಪೇಟೆ 4ನೇ ಮುಖ್ಯರಸ್ತೆಯಲ್ಲಿ ನೀರು ತುಂಬಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು.

ಭಾರೀ ಮಳೆಗೆ ಗಾಂಧಿ ಬಜಾರ್, ಶ್ರೀನಗರ ಮುಖ್ಯ ರಸ್ತೆ, ರಾಮಕೃಷ್ಣಾಶ್ರಮ ಸರ್ಕಲ್ ರಸ್ತೆಯಲ್ಲಿ ನೀರು ತುಂಬಿತ್ತು. ಪರಿಣಾಮ ದ್ವಿಚಕ್ರ, ಆಟೋ ವಾಹನ ಸವಾರರ ಪರದಾಟ ಅನುಭವಿಸಿದರು. ಅಲ್ಲದೆ ಮಳೆಯಿಂದಾಗಿ ವಾಹನ ಸವಾರರು ಬಸ್ ನಿಲ್ದಾಣ, ಅಂಗಡಿಗಳ ಬಳಿ ಆಶ್ರಯ ಪಡೆಯುವಂತಾಗಿತ್ತು. ಇನ್ನು ರಸ್ತೆ ಬದಿಯಲ್ಲಿ ನಿಂತಿದ್ದ ದ್ವಿಚಕ್ರ ವಾಹನಗಳು ಸಂಪೂರ್ಣ ಜಲಾವೃತಗೊಂಡವು. ಗಾಂಧಿ ಬಜಾರ್ ನಲ್ಲಿ ರಸ್ತೆ ಬದಿಯಲ್ಲಿದ್ದ ಹೂ, ತರಕಾರಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ.  ಶಾಂತಿನಗರ ಬಸ್ ನಿಲ್ದಾಣದ ಎರಡೂ ಕಡೆಯ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಕೆರೆಯಂತಾದ ರಸ್ತೆಗಳಲ್ಲೇ ವಾಹನಗಳು ಸಂಚರಿಸಿದವು.

ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ನವರಂಗ, ಸುಬ್ರಹ್ಮಣ್ಯ ನಗರ, ಶಿವನಹಳ್ಳಿ, ರಾಜ್ ಕುಮಾರ್ ರಸ್ತೆ ಸೇರಿದಂತೆ ಹಲವೆಡೆ ಮಳೆಯಾಗಿದೆ. ಚಾಮರಾಜಪೇಟೆಯ ಜಿಂಕೆ ಪಾರ್ಕ್ ಬಳಿ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಜಲಾವೃತಗೊಂಡಿವೆ. ಮಳೆ ನೀರು ಹೊರ ಹಾಕಲು ಕುಟುಂಬಸ್ಥರು ಹರಸಾಹಸ ಪಟ್ಟರು. ಇತ್ತ ಕೆ ಪಿ ಅಗ್ರಹಾರದಲ್ಲಿ ಸುಮಾರು 35ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. 

SCROLL FOR NEXT