ರಾಜ್ಯ

ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉಚಿತ ಶಾಲೆ ಮತ್ತು ಆಸ್ಪತ್ರೆ ನಿರ್ಮಾಣ: ಜನಾರ್ಧನ ರೆಡ್ಡಿ

Shilpa D

ಹುಬ್ಬಳ್ಳಿ: ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಶಾಲೆ ಮತ್ತು ಆಸ್ಪತ್ರೆ ನಿರ್ಮಿಸುವುದಾಗಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಜಿ ಹೇಳಿದ್ದಾರೆ.

ನಟ ಪುನೀತ್ ರಾಜಕುಮಾರ್ ಅವರ 11ನೇ ದಿನದ ಸಮಾರಾಧನೆ ನಿಮಿತ್ತ ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರಿಗಾಗಿ ಉಚಿತ ಆಸ್ಪತ್ರೆ ಮತ್ತು ಮಕ್ಕಳಿಗೆ ಉಚಿತ ಶಿಕ್ಷಣಕ್ಕಾಗಿ ಶಾಲೆ ನಿರ್ಮಿಸುವುದಾಗಿ ತಿಳಿಸಿದ್ದಾರೆ.

ಶೀಘ್ರದಲ್ಲೇ ಆಸ್ಪತ್ರೆ ಮತ್ತು ಶಾಲೆ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ರೆಡ್ಡಿ ಹೇಳಿದ್ದಾರೆ. ತಾವು ಪುನೀತ್ ಕುಟುಂಬದ ಜೊತೆ ಅತ್ಯಂತ ಅವಿನಾಭಾವ ಸಂಬಂಧ ಹೊಂದಿದ್ದಾಗಿ ತಿಳಿಸಿದ ಅವರು, ನನ್ನ ಮಗ ಚಿತ್ರರಂಗದಲ್ಲಿ ಅದೃಷ್ಟವನ್ನು ಪರೀಕ್ಷಿಸಲು ಬಯಸಿದಾಗ ಪುನೀತ್ ನನಗೆ ಬೆಂಬಲವನ್ನು ನೀಡಿದ್ದರು.

ಪುನೀತ್ ಅವರ ಸಾಮಾಜಿಕ ಕಾರ್ಯಗಳು ಜನಸಾಮಾನ್ಯರಲ್ಲಿ ಅವರ ಬಗ್ಗೆ ಅಪಾರ ಗೌರವವನ್ನು ಹೆಚ್ಚಿಸಿವೆ. ಅವರ ಕಾರ್ಯದಿಂದ ಸ್ಫೂರ್ತಿ ಪಡೆದು ಬಳ್ಳಾರಿಯಲ್ಲೂ ಶಾಲೆ ಮತ್ತು ಆಸ್ಪತ್ರೆ  ಸ್ಥಾಪಿಸುತ್ತೇನೆ ಎಂದರು.

ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ, ಅವರ ತಾಯಿ ಹೆಸರಿನಲ್ಲಿರುವ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮದಲ್ಲಿ, ಲಕ್ಷ್ಮಿ ಅರುಣಾ, ಸಹೋದರ ಹಾಗೂ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಪುನೀತ್  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಹೊಸ ಬಟ್ಟೆ ಮತ್ತು ಅನ್ನಸಂತರ್ಪಣೆ ಮಾಡಲಾಯಿತು.

ನಟ ಪುನೀತ್ ರಾಜ್‌ಕುಮಾರ್‌ಗೆ ಬಳ್ಳಾರಿ ಬಗ್ಗೆ ಹೆಚ್ಚಿನ ಆಕರ್ಷಣೆ ಹೊಂದಿದ್ದರು. ಹೀಗಾಗಿ  ಬಳ್ಳಾರಿ ನಗರ ಬಸ್ ನಿಲ್ದಾಣಕ್ಕೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ರೆಡ್ಡಿ ಹೇಳಿದರು. ಬಳ್ಳಾರಿ ಮತ್ತು ವಿಜಯನಗರದಲ್ಲಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ ಹಾಗಾಗಿ ಜಿಲ್ಲಾಡಳಿತ ಈ  ಬೇಡಿಕೆಯನ್ನು ಒಪ್ಪಿಕೊಳ್ಳಬೇಕು ಎಂದರು.

SCROLL FOR NEXT