ರಾಜ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿ ಪ್ರವಾಸ: ಹೈಕಮಾಂಡ್ ಭೇಟಿ ಮಾಡಿ ಚರ್ಚೆ ಸಾಧ್ಯತೆ 

Sumana Upadhyaya

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬುಧವಾರ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಘೋಷಣೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಕಳೆದ ಅಕ್ಟೋಬರ್ 30ರಂದು ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದ ಉಪ ಚುನಾವಣೆ ಮುಗಿದು ಹಾಗೂ ಸಿಎಂ ಆಗಿ ಅಧಿಕಾರ ವಹಿಸಿ 100 ದಿನಗಳು ಕಳೆದ ನಂತರ ದೆಹಲಿಗೆ ಸಿಎಂ ಅವರು ಭೇಟಿ ನೀಡುತ್ತಿರುವುದು ಇದೇ ಮೊದಲು. ಸಿಎಂ ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪ್ರವಾಸದ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆಯಿದೆ. 

ಇಂದು ಬೆಳಗ್ಗೆ 9.45 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು, ಮಧ್ಯಾಹ್ನ 12:40 ಕ್ಕೆ ದೆಹಲಿ ತಲುಪಿದ ಬಳಿಕ ಕೇಂದ್ರದ ಸಚಿವರನ್ನು ಭೇಟಿಯಾಗಲಿದ್ದಾರೆ. ರಾಜ್ಯಕ್ಕೆ ಸಂಬಂಧಪಟ್ಟ ಯೋಜನೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಹೆಚ್ಚಿನ ಮಾತುಕತೆ ನಡೆಯಲಿದೆ ಎನ್ನಲಾಗುತ್ತಿದೆ.

ಇಂದು ಸಂಜೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿಗಳು ಬೆಂಗಳೂರಿಗೆ ಯಾವಾಗ ವಾಪಸ್ಸಾಗುತ್ತಾರೆ ಎಂಬ ಬಗ್ಗೆ ನಿಗದಿಯಾಗಿಲ್ಲ. ಇತ್ತೀಚಿನ ಹಾನಗಲ್, ಸಿಂದಗಿ ಉಪ ಚುನಾವಣೆಗಳ ಫಲಿತಾಂಶ, ವಿಧಾನ ಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆ, ಬಿಟ್ ಕಾಯಿನ್ ಹಗರಣದ ಬಗ್ಗೆ ವಿವಾದ ಕುರಿತು ಕೇಂದ್ರದ ವರಿಷ್ಠರು ಸಿಎಂ ಅವರಿಂದ ಮಾಹಿತಿ ಕೇಳುವ ಸಾಧ್ಯತೆಯಿದೆ. 

ಇನ್ನು ಒಂದೂವರೆ ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಲಿದ್ದು, ಅದಕ್ಕೆ ಮುನ್ನ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ಹೊಸದಾಗಿ ನೇಮಕ ಮಾಡುವ ಕುರಿತು ವರಿಷ್ಠರ ಬಳಿ ಸಿಎಂ ಚರ್ಚೆ ನಡೆಸುವ ಸಾಧ್ಯತೆಯಿದೆ. 

ವಿಧಾನ ಪರಿಷತ್ ಗೆ ಚುನಾವಣಾ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳು ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ಇಂದಿನ ಭೇಟಿ ಸಮಯದಲ್ಲಿ ಹೈಕಮಾಂಡ್ ಮುಂದೆ ಮುಖ್ಯಮಂತ್ರಿಗಳು ಇಡುವ ಸಾಧ್ಯತೆಯಿದೆ.

ಕಳೆದ ಜುಲೈ 26ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಿಎಂ ಬೊಮ್ಮಾಯಿಯವರ 5ನೇ ದೆಹಲಿ ಪ್ರವಾಸ ಇದಾಗಿದೆ. 

SCROLL FOR NEXT