ರಾಜ್ಯ

ಗ್ರಾಮೀಣ ಪ್ರದೇಶಗಳ ಸ್ವಚ್ಛತೆಗೆ, ತ್ಯಾಜ್ಯ ವಿಲೇವಾರಿಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ತರಬೇತಿ: ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಮ

Sumana Upadhyaya

ಬೆಂಗಳೂರು: ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛವಾಗಿಡಲು ಮತ್ತು ಗ್ರಾಮೀಣ ಪ್ರದೇಶಗಳ ಜನರ ಸ್ವಾವಲಂಬನೆಗೆ ಸಹಾಯ ಮಾಡಲು ಪಂಚಾಯತ್ ಮಟ್ಟದಲ್ಲಿ ಮಹಿಳೆಯರು ಹೆಚ್ಚಿನ ಪಾತ್ರವನ್ನು ವಹಿಸುತ್ತಾರೆ. ಇವರಿಗೆ ಗ್ರಾಮೀಣ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣೆ ಹಾಗೂ ಆಸಕ್ತ ಮಹಿಳೆಯರಿಗೆ ಕಸ ಸಂಗ್ರಹಿಸುವ ಆಟೋ ಓಡಿಸಲು ಮಹಿಳಾ ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ ಡಿಪಿಆರ್) ಇಲಾಖೆ ಒತ್ತು ನೀಡುತ್ತಿದೆ.

ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಗ್ರಾಮೀಣ ಕುಡಿಯುವ ನೀರು ಮತ್ತು ಶುಚಿತ್ವ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್ಆರ್ ಎಲ್ಎಂ) ಜಂಟಿಯಾಗಿ ಸ್ವಸಹಾಯ ಗುಂಪುಗಳ 18 ಸಾವಿರ ಸದಸ್ಯರಿಗೆ ತರಬೇತಿ ನೀಡುತ್ತಿದೆ. ಮಹಿಳೆಯರು ಈಗಾಗಲೇ ಅನೇಕ ಗ್ರಾಮಗಳಲ್ಲಿ ತ್ಯಾಜ್ಯ ಸಂಗ್ರಹ ವ್ಯವಸ್ಥೆಯ ಭಾಗವಾಗಿದ್ದಾರೆ. ನಗರ ಪ್ರದೇಶಗಳಂತೆ, ಹಳ್ಳಿಗಳಲ್ಲಿ ಪ್ರತಿ ಮನೆಯಿಂದ ವಾರಕ್ಕೆ ಮೂರು ಬಾರಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮಗಳಲ್ಲಿ ಕಸ ವಿಲೇವಾರಿ ಮಾಡಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ಅಥವಾ ಗ್ರಾಮ ಪಂಚಾಯಿತಿ ಮಟ್ಟದ ಫೆಡರೇಶನ್ (ಜಿಪಿಎಲ್‌ಎಫ್) ಗುಂಪುಗಳನ್ನು ಗುರುತಿಸಲು ಪಂಚಾಯಿತಿಗಳಿಗೆ ಸೂಚಿಸಿದೆ. ಈ ಗುಂಪುಗಳಿಗೆ ಮೂಲದಲ್ಲಿಯೇ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸುವುದು, ಮನೆ ಬಾಗಿಲಿನಿಂದ ತ್ಯಾಜ್ಯ ಸಂಗ್ರಹಿಸುವುದು, ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವವರೆಗೆ ತರಬೇತಿ ನೀಡಲಾಗುತ್ತದೆ.

ಈ ಗುರುತಿಸಲ್ಪಟ್ಟ ಗುಂಪುಗಳಿಗೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಅಥವಾ ಇತರ ಜಿಲ್ಲಾ ಕೇಂದ್ರಗಳಲ್ಲಿ ಎನ್‌ಜಿಒಗಳ ಮೂಲಕ ತರಬೇತಿ ನೀಡಲಾಗುವುದು. ತರಬೇತಿಯ ನಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಯ್ಕೆಯಾದ ಗುಂಪುಗಳು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಿದ್ದಾರೆ. ಅಧಿಕಾರಿಗಳು ಕಸ ವಿಲೇವಾರಿಯಲ್ಲಿ ಸ್ವಸಹಾಯ ಗುಂಪುಗಳಿಗೆ ಜವಾಬ್ದಾರಿಯನ್ನು ನೀಡುತ್ತಾರೆ.

ಕಸ ನಿರ್ವಹಣೆ ಮಾಡುವ ಸ್ವಸಹಾಯ ಗುಂಪುಗಳು ಸ್ವಾವಲಂಬಿಯಾಗುವವರೆಗೆ ಗ್ರಾಮ ಪಂಚಾಯಿತಿಗಳು ಆರ್ಥಿಕ ನೆರವು ನೀಡಬೇಕು. ಕಸ ಸಂಗ್ರಹಣೆಗಾಗಿ ಅವರು ಪ್ರತಿ ಮನೆಯಿಂದ ಶುಲ್ಕವನ್ನು ಸಂಗ್ರಹಿಸಬಹುದು, ಕಸ ವಿಲೇವಾರಿ ಮತ್ತು ನಿರ್ವಹಣೆಗೆ ಬಳಸಬೇಕು ಎಂದು ಸರ್ಕಾರಿ ಆದೇಶದಲ್ಲಿ ಒತ್ತು ನೀಡಲಾಗಿದೆ. 

ಗ್ರಾಮ ಪಂಚಾಯತ್‌ಗಳು ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರೋತ್ಸಾಹಿಸಬೇಕು, ಅವರು ಆರ್ಥಿಕವಾಗಿ ಸಬಲರಾಗುವಂತೆ ನೋಡಿಕೊಳ್ಳಬೇಕು. ತ್ಯಾಜ್ಯ ಸಂಸ್ಕರಣೆಗೆ ಪ್ರದೇಶವನ್ನು ಗುರುತಿಸಬೇಕು. ಒಣ ತ್ಯಾಜ್ಯವನ್ನು ಸಂಗ್ರಹಿಸಲು ಚಿಂದಿ ಆಯುವವರನ್ನು ತೊಡಗಿಸಿಕೊಳ್ಳುವಂತೆ ಮಹಿಳಾ ಗುಂಪುಗಳಿಗೂ ತಿಳಿಸಲಾಗಿದೆ. ಸುಡಬೇಕಾದ ತ್ಯಾಜ್ಯವನ್ನು ತ್ಯಾಜ್ಯದಿಂದ ಪಡೆದ ಇಂಧನವಾಗಿ ಪರಿವರ್ತಿಸಿ ಸಿಮೆಂಟ್ ಕಾರ್ಖಾನೆಗಳು ಮತ್ತು ಇತರ ಕೈಗಾರಿಕೆಗಳಿಗೆ ಮಾರಾಟ ಮಾಡುವಂತೆ ಕೂಡ ತರಬೇತಿ, ಜಾಗೃತಿ ಮೂಡಿಸಲಾಗುತ್ತದೆ.

SCROLL FOR NEXT