ರಾಜ್ಯ

ಅಧಿಕಾರಿಯ ವರ್ಗಾವಣೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್

Manjula VN

ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ರಾಜಕೀಯ ನಾಯಕರ ಹಸ್ತಕ್ಷೇಪದಿಂದ ದಕ್ಷ ಆಡಳಿತ ವ್ಯವಸ್ಥೆ ಅಪಾಯಕ್ಕೆ ಸಿಲುಕಲಿದೆ ಎಂದು ಹೈಕೋರ್ಟ್ ಗುರುವಾರ ಆತಂಕ ವ್ಯಕ್ತಪಡಿಸಿದೆ.

ಬೆಸ್ಕಾಂ ನ ಸಹಾಯಕ ಅಭಿಯಂತರ ಡಿ ನವೀನ್ ಎಂಬುವರು ತಮ್ಮ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ವರ್ಗಾವಣೆ ವಿಚಾರದಲ್ಲಿ ಸಚಿವರು ಹಸ್ತಕ್ಷೇಪ ಮಾಡುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟಿತು.

ಸರ್ಕಾರಿ ನೌಕರರ ಹಾಗೂ ಅಧಿಕಾರಿಗಳ ವರ್ಗಾವಣೆ ಹಾಗೂ ಹುದ್ದೆ ತೋರಿಸುವ ವಿಷಯದಲ್ಲಿ ಸಚಿವರುಗಳು ಅಥವಾ ರಾಜಕಾರಣಿಗಳು ಹಸ್ತಕ್ಷೇಪ ಮಾಡಿದರೆ ಸರ್ಕಾರಿ ಕಚೇರಿಗಳನ್ನು ರಾಜಕೀಕರಣಗೊಳಿಸುವುದು ಅಲ್ಲದೆ ಅಧಿಕಾರಿಗಳು ದಕ್ಷತೆಯಿಂದ ಸೇವೆಸಲ್ಲಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಉತ್ತಮ ಆಡಳಿತ ವ್ಯವಸ್ಥೆಯು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್ ನಾಗಪ್ರಸನ್ನ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸಚಿವರು ಮಾಡಿದ ಶಿಫಾರಸ್ಸಿನ ಆಧಾರದ ಮೇಲೆ ಬೆಸ್ಕಾಂ ಹೊರಡಿಸಿದ್ದ ವರ್ಗಾವಣೆಯ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಅರ್ಜಿದಾರ ಡಿ ನವೀನ್ ಅವರಿಗೆ ಮೊದಲು ತೋರಿಸಿದ್ದ ಸ್ಥಾನದಲ್ಲಿಯೇ ಮುಂದುವರಿಸಲು ಆದೇಶ ನೀಡಿದೆ. ಅಲ್ಲದೆ, ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಸ್ಥಳೀಯ ಶಾಸಕರಿಗೆ ಅಧಿಕಾರಿಗಳನ್ನು ಆಯ್ಕೆಮಾಡುವ ಹಕ್ಕು ಇರುತ್ತದೆ. ಆದರೆ ಸಚಿವರುಗಳು ಹಾಗೂ ರಾಜಕಾರಣಿಗಳು ಈ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದೆ.

SCROLL FOR NEXT