ರಾಜ್ಯ

ಬೆಂಗಳೂರಿನಲ್ಲಿ ಇದೇ ಮೊದಲು: ಡ್ರೋನ್ ಬಳಸಿ ಕೋವಿಡ್ ಲಸಿಕೆ ಸಾಗಣೆ

Nagaraja AB

ಬೆಂಗಳೂರು: ನಗರದ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ  ಆರು ಕಿಲೋ ಮೀಟರ್ ದೂರವಿರುವ  ಆನೇಕಲ್ ನಲ್ಲಿರುವ ಹಾರಗದ್ದೆ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಡ್ರೋನ್ ಮೂಲಕ ವಿಶೇಷ ಕಂಟೇನರ್ ನಲ್ಲಿ ಕೋವಿಡ್ ಲಸಿಕೆಯ 50 ಬಾಟಲಿಗಳು ಮತ್ತು ಸಿರಿಂಜುಗಳನ್ನು ಯಶಸ್ವಿಯಾಗಿ ರವಾನಿಸಲಾಗಿದೆ. 

ಇದನ್ನು ಕಂಡು  ಹಾರಗದ್ದೆ ಸಾರ್ವಜನಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇಂದು ಬೆಳಗ್ಗೆ ಚಕಿತರಾದರು. ಏಳು ಕಿಲೋ ಮೀಟರ್ ದೂರವನ್ನು ಕೇವಲ 10 ನಿಮಿಷಗಳಲ್ಲಿಯೇ ತಲುಪಲಾಯಿತು. ಬದಲಿಗೆ ಏನಾದರೂ ರಸ್ತೆ ಮೇಲೆ ತೆರಳಿದ್ದರೆ 40 ನಿಮಿಷ ಬೇಕಾಗಿತ್ತು. ಇದು ಬೆಂಗಳೂರಿನಲ್ಲಿ ನಡೆದ ಮೊದಲ ಯಶಸ್ವಿ ಕಾರ್ಯಾಚರಣೆಯಾಗಿದೆ. 

ದೂರದ ಪ್ರದೇಶಗಳಿಗೆ ಕೋವಿಡ್-19 ಲಸಿಕೆಗಳ ವೈಮಾನಿಕ ವಿತರಣೆಗಾಗಿ ನ್ಯಾಷನಲ್ ಏರೋಸ್ಪೆಸ್ ಲ್ಯಾಬೋರೇಟರೀಸ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಕೈ ಜೋಡಿಸಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಅಡಿಯಲ್ಲಿ ಎನ್ ಎಎಲ್, ಸುಲಭ ಹಾರಟಕ್ಕಾಗಿ ಕಡಿಮೆ ತೂಕದ ಕಾರ್ಬನ್ ಫೈಬರ್ ಪೋಲ್ಡಬಲ್ ರಚನೆಯಿಂದ ಮಾಡಲಾದ ದೇಶೀಯ, ಮಧ್ಯಮ ವರ್ಗದ ಬಿವಿಎಲ್ ಒಎಸ್ ಮಲ್ಟಿ- ಕಾಪ್ಟರ್ ಯುಎವಿ ಅನ್ನು ಅಭಿವೃದ್ಧಿಪಡಿಸಿದೆ.

ಎನ್ ಎಎಲ್ ನ ಈ ಡ್ರೋನ್ ನಲ್ಲಿ  15 ಕೆಜಿಯಷ್ಟು ವಸ್ತುಗಳನ್ನು ಸಾಗಣೆ ಮಾಡಬಹುದಾಗಿದೆ. 36 km/hour ಗರಿಷ್ಠ ವೇಗದೊಂದಿಗೆ 500 ಮೀಟರ್  ಎತ್ತರದಲ್ಲಿ ಇದು ಹಾರಾಟ ಮಾಡಬಹುದಾಗಿದೆ. ಇವುಗಳ ಪರೀಕ್ಷಾರ್ಥ ಹಾರಾಟಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಷರತ್ತುಬದ್ಧ ಅನುಮತಿ ನೀಡಿದೆ.

ಕರ್ನಾಟಕದಲ್ಲಿ ಕೃಷಿ ಬೆಳೆಗೆ ಕೀಟನಾಶಕಗಳ ಸಿಂಪಡಣೆ, ಬೆಳೆ ಮೇಲ್ವಿಚಾರಣೆ, ಗಣಿ ಸರ್ವೆ ಮತ್ತಿತರ ಕೆಲಸಗಳಲ್ಲಿ ಡ್ರೋನ್ ಬಳಸಲಾಗುತ್ತಿದೆ. ದೂರದ ಪ್ರದೇಶಗಳಿಗೆ ಲಸಿಕೆ ಸಾಗಾಟ ಮಾಡಲು ಇಂತಹ ಡ್ರೋನ್ ಗಳ ಅಗತ್ಯವಿರುವುದಾಗಿ ಸಿಎಸ್ ಐಆರ್- ಎನ್ ಎಎಲ್ ಯುಎವಿ ಮುಖ್ಯಸ್ಥ ಡಾ. ಪಿ. ವಿ. ಸತ್ಯನಾರಾಯಣ ಮೂರ್ತಿ ಹೇಳಿದ್ದಾರೆ. 
 

SCROLL FOR NEXT