ರಾಜ್ಯ

ಶಬ್ದ ಮಾಲಿನ್ಯ: ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ಸೂಚನೆ

Manjula VN

ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಯಾವ ಕಾನೂನಿನ ಅಡಿ ಅವಕಾಶ ಮಾಡಿಕೊಡಲಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸರಿಗೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

ಬೆಂಗಳೂರಿನ ಕೆಲವು ಮಸೀದಿಗಳು ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಿ ಪಿ ರಾಕೇಶ್ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಸಂಬಂಧಿತ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಈ ವೇಳೆ ತಮ್ಮ ಮುಂದೆ ಪ್ರತಿವಾದಿಗಳಾಗಿರುವ 16 ಮಸೀದಿಗಳಿಗೆ ಕಾನೂನಿನ ಯಾವ ಅಧಿನಿಯಮಗಳ ಅಡಿ ಧ್ವನಿವರ್ಧಕಗಳು ಮತ್ತು ಸಾರ್ವಜನಿಕ ಭಾಷಣಕ್ಕೆ ಬಳಸುವ ಪರಿಕರಗಳನ್ನು ಬಳಸಲು ಅನುಮತಿಸಲಾಗಿದೆ ಎಂದು ತಿಳಿಸುವಂತೆ ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶಿಸಿತು.

ಶಬ್ದ ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಅಂತಹ ಬಳಕೆಯನ್ನು ನಿರ್ಬಂಧಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಇದೇ ವೇಳೆ ನ್ಯಾಯಾಲಯವು ಪ್ರಶ್ನಿಸಿತು.

“ಕಾನೂನಿನ ಯಾವ ನಿಬಂಧನೆಗಳ ಅಡಿ ಪ್ರತಿವಾದಿ ಮಸೀದಿಗಳಿಗೆ ಧ್ವನಿವರ್ಧಕ ಮತ್ತು ಸಾರ್ವಜನಿಕ ಭಾಷಣಕ್ಕೆ ಬಳಸುವ ಪರಿಕರಗಳನ್ನು ಬಳಸಲು ಅನುಮತಿಸಲಾಗಿದೆ. ಶಬ್ದ ಮಾಲಿನ್ಯ (ಸುಧಾರಣೆ ಮತ್ತು ನಿಯಂತ್ರಣ) ನಿಯಮಗಳು 2000ರ ಅಡಿ ಅದನ್ನು ನಿಯಂತ್ರಿಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

SCROLL FOR NEXT