ರಾಜ್ಯ

ರಾಜ್ಯದಲ್ಲಿ ಮಹಿಳೆಯರಿಗೆ ಪ್ರತ್ಯೇಕ ನಾಲ್ಕು ಕೈಗಾರಿಕಾ ಪಾರ್ಕ್ ಗಳು: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

Sumana Upadhyaya

ಬೆಂಗಳೂರು: ರಾಜ್ಯದ ಮೈಸೂರು, ಧಾರವಾಡ, ಹಾರೋಹಳ್ಳಿ ಮತ್ತು ಕಲಬುರಗಿಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಮೀಸಲಾದ ಪ್ರತ್ಯೇಕ ಕೈಗಾರಿಕಾ ಪಾರ್ಕ್ ನ್ನು ಸ್ಥಾಪಿಸಲಾಗುವುದು ಎಂದು ಭಾರೀ ಮತ್ತು ಮಧ್ಯಮ ಗಾತ್ರ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಮಹಿಳಾ ಉದ್ಯಮಿಗಳಿಗೆ ಮೀಸಲಾದ ಪಾರ್ಕ್ ದೇಶದಲ್ಲಿಯೇ ಮೊದಲನೆಯದು.

ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ ಅಂಗವಾಗಿ ಯುಬಿಯುಎನ್ ಟಿಯು ಸಮೂಹ ಆಯೋಜಿಸಿದ್ದ 'ಒಟ್ಟಾಗಿ ನಾವು ಬೆಳೆಯೋಣ' ಎಂಬ ಮಹಿಳಾ ಉದ್ಯಮಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಮಹಿಳಾ ಉದ್ಯಮಿಗಳು ಬಳಸಿಕೊಳ್ಳುವಂತೆ ಒತ್ತಾಯಿಸಿದರು. 

ಮಹಿಳೆಯರಿಗೆ ಮೀಸಲಾದ ಕೈಗಾರಿಕಾ ಪಾರ್ಕ್ ಗಳನ್ನು ದೇಶದಲ್ಲಿ ಸ್ಥಾಪಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಮಹಿಳಾ ಉದ್ಯಮಿಗಳು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕೈಗಾರಿಕೆಗಳ ಬೆಳವಣಿಗೆಗೆ ಸರ್ಕಾರದ ಅಭಿಯಾನದಲ್ಲಿ ಕೈಜೋಡಿಸಬೇಕು, ಮಹಿಳೆಯರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಉದ್ಯೋಗಗಳನ್ನು ಒದಗಿಸಬೇಕು ಎಂದು ಸಚಿವ ನಿರಾಣಿ ಸಲಹೆ ನೀಡಿದರು.

ರಾಜ್ಯದಲ್ಲಿನ ಮಹಿಳಾ ಉದ್ಯಮಶೀಲರು ಉದ್ಯೋಗ ಸೃಷ್ಟಿಮಾಡಬೇಕೆಂದು ಸಹ ಕರೆ ನೀಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರು ಕೂಡ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ತೋರುತ್ತಿದ್ದಾರೆ. ಮಹಿಳೆಯರು ಉದ್ಯಮಶೀಲರಾಗಿ ಉದ್ಯೋಗ ಸೃಷ್ಟಿಸಿದಾಗ ಮಹಿಳೆಯರ ಸಶಕ್ತೀಕರಣ ಇನ್ನಷ್ಟು ಆಗುತ್ತದೆ ಎಂದರು. 

ಸರ್ಕಾರ ವಿವಿಧ ಅಭಿಯಾನಗಳ ಮೂಲಕ ಮಹಿಳಾ ಉದ್ಯಮಶೀಲರನ್ನು ಪ್ರೋತ್ಸಾಹಿಸಿ ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಹೊರಗೆ ತಂದು ಉದ್ಯೋಗ ಸೃಷ್ಟಿಸುವಲ್ಲಿ ಹಾಗೂ ಆ ಮೂಲಕ ರಾಜ್ಯಕ್ಕೆ ಲಾಭ ತರುವಲ್ಲಿ ಗಮನ ನೀಡುತ್ತದೆ ಎಂದರು.

ಮಹಿಳೆಯರಿಗೆ ರಾತ್ರಿಪಾಳಿ: ದುರ್ಬಲ ವರ್ಗದ ಮಹಿಳಾ ಉದ್ಯಮಿಗಳಿಗೆ ಸರ್ಕಾರ ಪ್ರೋತ್ಸಾಹಕಗಳನ್ನು ನೀಡಲಿದೆ. ಫ್ಯಾಕ್ಟರಿಗಳ ಕಾಯ್ದೆ 1948ರ ತಿದ್ದುಪಡಿ ಪ್ರಕಾರ, ಮಹಿಳೆಯರು ರಾತ್ರಿ ಪಾಳಿಯಲ್ಲಿ ಅಂದರೆ ಸಾಯಂಕಾಲ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಹೊಸ ಕೈಗಾರಿಕಾ ನೀತಿಯಡಿ ಎಸ್.ಸಿ/ಎಸ್.ಟಿ ಸಮುದಾಯದಂತಹ ವಿಶೇಷ ಮಹಿಳಾ ಉದ್ಯಮಶೀಲರಿಗೆ ಹೆಚ್ಚುವರಿ ಪ್ರೋತ್ಸಾಹಕಗಳನ್ನು ನೀಡುವ ಉದ್ದೇಶ ಕೂಡ ಸರ್ಕಾರದ ಮುಂದಿದೆ ಎಂದು ಕೈಗಾರಿಕಾ ಸಚಿವ ನಿರಾಣಿ ತಿಳಿಸಿದರು.

SCROLL FOR NEXT