ರಾಜ್ಯ

ಕೋವಿಡ್-19: ರಾಜ್ಯದಲ್ಲಿ 7 ಕೋಟಿ ಡೋಸ್‌ ಲಸಿಕೆ ವಿತರಣೆ

Manjula VN

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2.83ಲಕ್ಷ ಡೋಸ್‌ ಕೋವಿಡ್ ಲಸಿಕೆಗಳನ್ನು ವಿತರಿಸಲಾಗಿದ್ದು, ಇದರೊಂದಿಗೆ ಈವರೆಗೆ ರಾಜ್ಯದಲ್ಲಿ ನೀಡಲಾದ ಒಟ್ಟು ಡೋಸ್‌ಗಳ ಸಂಖ್ಯೆ 7 ಕೋಟಿಯ ಗಡಿ ದಾಟಿದೆ.

ಶನಿವಾರ ಸಂಜೆ 6 ಗಂಟೆ ವೇಳೆಗೆ 2.83 ಲಕ್ಷ ಡೋಸ್ ಲಸಿಕೆ ನೀಡಲಾಗಿತ್ತು. ಈ ಮೂಲಕ ಒಟ್ಟು ಲಸಿಕೆ ಪ್ರಮಾಣ 7,01,99,026 ಡೋಸ್ ತಲುಪಿದೆ.

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4.83 ಕೋಟಿ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈ ಪೈಕಿ ಶೇ.90.41 ರಷ್ಟು ಮಂದಿಗೆ ಅಂದರೆ 4,36,71,680 ಮಂದಿಗೆ ಮೊದಲ ಡೋಸ್, ಶೇ.54.92ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದ್ದು, 2,65,27,346 ಮಂದಿ ಎರಡೂ ಡೋಸ್ ಲಸಿಕೆ ಪಡೆದಂತಾಗಿದೆ.

ರಾಜ್ಯ ಸರ್ಕಾರವು ನವೆಂಬರ್ ಅಂತ್ಯದ ವೇಳೆಗೆ ಕನಿಷ್ಠ ಒಂದು ಡೋಸ್ ಮತ್ತು ಡಿಸೆಂಬರ್ ಅಂತ್ಯದ ವೇಳೆಗೆ ಎರಡೂ ಡೋಸ್‌ಗಳಲ್ಲಿ ಶೇಕಡಾ 75 ರಷ್ಟು ಅರ್ಹ ವಯಸ್ಕ ಜನಸಂಖ್ಯೆಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದು, ಈ  ನಡುವಲ್ಲೇ 7 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಎಲ್ಲಾ ವಯಸ್ಕರಿಗೂ ವರ್ಷಾಂತ್ಯದ ವೇಳೆಗೆ ಲಸಿಕೆ ಹಾಕಲು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತದೆ. ಜನರು ಹಿಂಜರಿಕೆ ಇಲ್ಲದೆ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಲು ಮುಂದೆ ಬರಬೇಕೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

ಎನ್‌ಜಿಒಗಳು ಮತ್ತು ಆಶಾ ಕಾರ್ಯಕರ್ತರೊಂದಿಗೆ ರಾಜ್ಯ ಸರ್ಕಾರ ಕೈಜೋಡಿಸಿದ್ದು, 'ಹರ್ ಘರ್ ದಸ್ತಕ್' ಅಭಿಯಾನದ ಭಾಗವಾಗಿ ಪ್ರತೀ ಮನೆಯ ಬಾಗಿಲಿಗೆ ಹೋಗಿ ಅರ್ಹ ವ್ಯಕ್ತಿಗಳು ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳುವಂತೆ ಮನವೊಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.  

ಮುಖ್ಯವಾಗಿ ಜನರಲ್ಲಿರುವ ಲಸಿಕೆ ಕುರಿತು ಇರುವ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಲು, ರಾಜ್ಯ ಸರ್ಕಾರವು ಸ್ಥಳೀಯ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಧಾರ್ಮಿಕ ಮತ್ತು ಪ್ರಭಾವಿ ಮುಖಂಡರು ಮತ್ತು ತಾಲ್ಲೂಕು ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಜನರ ಮನವೊಲಿಸುವಂತೆ ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ.

SCROLL FOR NEXT