ರಾಜ್ಯ

ಹಣದಾಸೆಗೆ ಸ್ನೇಹಿತನನ್ನೆ ಅಪಹರಿಸಿದ ಸಹಪಾಠಿಗಳು! ಐವರು ಆರೋಪಿಗಳು ಬಂಧನ

Nagaraja AB

ಬೆಂಗಳೂರು: ಹಣಕ್ಕಾಗಿ ತಮ್ಮ ಸ್ನೇಹಿತನನ್ನು ಕಿಡ್ನಾಪ್ ಮಾಡಿದ್ದ ಐವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನಿಲ್, ದೀಪು, ನಿಶ್ಚಯ್, ಭುವನ್ ಮತ್ತು ಪ್ರಜ್ವಲ್ ಬಂಧಿತ ಆರೋಪಿಗಳು. 

ಅಭಿಷೇಕ್ ಮೊದಲ ವರ್ಷದ ಬಿಸಿಎ ವಿದ್ಯಾರ್ಥಿ. ಆರೋಪಿಗಳಾದ ಭುವನ್ ಮತ್ತು ಪ್ರಜ್ವಲ್ ಆತನ ಕ್ಲಾಸ್ ಮೇಟ್ಸ್. ಅಭಿಷೇಕ್ ಓದಿನ ಜೊತೆಗೆ ರಿಯಲ್ ಎಸ್ಟೇಟ್ ಕಚೇರಿಯೊಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಾ ಬಂದ ಹಣದಲ್ಲಿ ತಮ್ಮ ಓದಿನ ಖರ್ಚಿನ ಜೊತೆಗೆ ಮನೆಯನ್ನು ಸಹ ನಿಭಾಯಿಸುತ್ತಿದ್ದರು.

ಅಭಿಷೇಕ್ ತುಂಬಾ ವ್ಯವಹಾರ ನಡೆಸುತ್ತಿದ್ದಾನೆ ಹಾಗೂ ಅವರ ತಂದೆ ಬಳಿ ತುಂಬಾ ಹಣ ಇರಬಹುದು ಎಂದು ಭಾವಿಸಿದ್ದ ಸ್ನೇಹಿತರು ಕಿಡ್ನಾಪ್ ಯೋಜನೆ ರೂಪಿಸಿದ್ದರು. ಆರೋಪಿ ದೀಪು ಮೂಲಕ ಇತರರನ್ನು ಭುವನ್ ಹಾಗೂ ಪ್ರಜ್ವಲ್ ಸಂಪರ್ಕಿಸಿದ್ದರು. ಅಂತಿಮವಾಗಿ 18ರಂದು ಅಭಿಷೇಕ್ ನ ಕಿಡ್ನಾಪ್ ಮಾಡಿ ನೆಲಮಂಗಲ, ದಾಬಸ್ ಪೇಟೆ, ದೇವನಹಳ್ಳಿ ಕಡೆ ಬ್ರೀಜ್ ಕಾರಿನಲ್ಲಿ ಆರೋಪಿಗಳು ಸುತ್ತಾಡಿಸಿದ್ದರು. 

ದೇವನಹಳ್ಳಿ ಬಳಿ ಸ್ಟಾಂಪ್ ಪೇಪರ್ ಖರೀದಿಸಿದ ಆರೋಪಿಗಳು, 10 ಲಕ್ಷ ಹಣ ಕೊಡಬೇಕು ಅಂತಾ ಅಭಿಷೇಕ್ ಹತ್ತಿರ ಬಲವಂತದಿಂದ ಬರೆಸಿಕೊಂಡಿದ್ದರು. ಆರೋಪಿಗಳು ತಮ್ಮ ಯೋಜನೆಯಂತೆ ಅಭಿಷೇಕ್ ತಂದೆ ಬಳಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಮಗ ಕಾಣೆಯಾಗಿದ್ದರಿಂದ ದಿಕ್ಕು ತೋಚದಂತಾದ ಅಭಿಷೇಕ್ ತಂದೆ ಆಟೋ ಚಾಲಕರಾಗಿದ್ದರೂ ತಮ್ಮ ಮನೆಯಲ್ಲಿದ್ದ ಚಿನ್ನ ಅಡವಿಟ್ಟು 45 ಸಾವಿರ ರೂಪಾಯಿ ಹೊಂದಿಸಿ ಆರೋಪಿಗಳ ಅಕೌಂಟ್ ಗೆ ಹಾಕಿದ್ದರು. ಕೊನೆಗೆ ಅಭಿಷೇಕ್ ನನ್ನು ಬಿಡಿಎ ಕಾಂಪ್ಲೆಕ್ಸ್ ಬ ಬಳಿ ಬಿಟ್ಟು ಹೋಗಿದ್ದರು. 

ಸದ್ಯ ಪ್ರಕರಣ ಸುಖಾಂತ್ಯ ಕಂಡಿದ್ದು, ಬಂಧಿತ ಐವರು ಆರೋಪಿಗಳಿಂದ 1 ಮೊಬೈಲ್ ಫೋನ್, ಇ- ಸ್ಟಾಂಪ್ ಪೇಪರ್, ಚಿನ್ನದ ಸರ ಮತ್ತು 80 ಸಾವಿರ ನಗದನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಜಪ್ತಿ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.

SCROLL FOR NEXT