ರಾಜ್ಯ

ಉಡುಪಿ: ದುಬಾರಿ ಬೆಲೆಯ ಭಾರಿ ಗಾತ್ರದ ಮೀನು ಬಲೆಗೆ; ಕೆಜಿಗೆ 9 ಸಾವಿರ ರೂ.!

Srinivasamurthy VN

ಮಂಗಳೂರು: ಮಂಗಳೂರಿನ ಮಲ್ಪೆ ಬೀಚ್ ನಲ್ಲಿ ಮೀನುಗಾರನ ಬಲೆಗೆ ಭಾರಿ ಗಾತ್ರದ ದುಬಾರಿ ಮೀನೊಂದು ಬಿದ್ದಿದ್ದು, ಇದರ ಬೆಲೆ ಪ್ರತೀ ಕೆಜಿಗೆ 9 ಸಾವಿರ ರೂಗೆ ಹರಾಜಾಗಿದೆ.

ಹೌದು.. ಮಲ್ಪೆ ಬೀಚ್ ನ ಆಳಸಮುದ್ರದಲ್ಲಿ ಬಲರಾಮ ಬೋಟ್ ನಲ್ಲಿ ಥೊಟ್ಟಮ್ ನಿವಾಸಿ ಶಾನ್ ರಾಜ್ ಎಂಬುವವರಿಗೆ 20 ಕೆಜಿ ತೂಕದ 'ಘೋಲ್‌ ಮೀನು' ದೊರಕಿದ್ದು, ಇದೇ ಮೊದಲ ಬಾರಿಗೆ ಈ ಮೀನು ಮಲ್ಪೆ ಬೀಚ್ ನಲ್ಲಿ ಬಲೆಗೆ ಬಿದ್ದಿದೆ. ಮಂಗಳವಾರ ಮಲ್ಪೆ ಬಂದರಿನಲ್ಲಿ ಹರಾಜಿನಲ್ಲಿ ಈ ವಿಶೇಷ ಮೀನಿಗೆ ಕೆ.ಜಿ.ಗೆ 9,000 ರೂ.ಗಳಂತೆ 1.80 ಲಕ್ಷ ರೂ.ಗೆ ಮಾರಾಟವಾಗಿದೆ. ಮೀನು ಸಂಸ್ಕರಣಾ ಸಂಸ್ಥೆಯೊಂದರ ಮಾಲೀಕ ಫಯಾಜ್ ಎಂಬುವವರು ಈ ಮೀನನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹರಾಜು ಪ್ರಕ್ರಿಯೆಯ ಮೂಲಕ ಮೀನುಗಾರರಿಂದ ಖರೀದಿಸಿದ್ದಾರೆ. 

ಇದೊಂದು ಬಹುಪಯೋಗಿ ಮೀನಾಗಿದ್ದು, ಈ ಮೀನಿನ ಚರ್ಮದಿಂದ ಸೌಂದರ್ಯ ವರ್ಧಕಗಳನ್ನು ತಯಾರಿಸುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಕಾರವಾರದ ಕೆಯು-ಪಿಜಿಸಿಯ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಬಿ.ಎಚ್ ಮತ್ತು ಗೋವಾದ ಐಸಿಎಆರ್ - ಸೆಂಟ್ರಲ್ ಕೋಸ್ಟಲ್ ಅಗ್ರಿಕಲ್ಚರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿ ಡಾ.ಶ್ರೀಕಾಂತ್ ಜಿಬಿ ಅವರು ಈ ಮೀನು ಪ್ರಭೇದವನ್ನು 'ಸಮುದ್ರ ಚಿನ್ನದ' ಮೀನು ಎಂದೂ ಕರೆಯುತ್ತಾರೆ. ಅತ್ಯಂತ ದುಬಾರಿ ಸಮುದ್ರ ಮೀನು ಇದಾಗಿದ್ದು, ಇಂಡೋ ಪೆಸಿಫಿಕ್ ಪ್ರದೇಶದಾದ್ಯಂತ ಹೆಚ್ಚಾಗಿ ಈ ಮೀನು ದೊರೆಯುತ್ತದೆ.

ತಜ್ಞರು ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ವಿಶ್ವನಿದ್ಯಾನಿಲಯದ ಕಡಲಜೀವಿ ಶಾಸ್ತ್ರ ವಿಭಾಗದ ಸಂಶೋಧಕ ಶಿವಕುಮಾರ್‌ ಹರಗಿ ಮತ್ತು ಶ್ರೀಕಾಂತ ಜಿ.ಬಿ. ಅವರು, 'ಸ್ಥಳೀಯವಾಗಿ ಗೋಲಿ ಮೀನು ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು ಘೋಲ್‌ ಫಿಶ್‌. ಈ ಮೀನಿನ ಹೊಟ್ಟೆಯನ್ನು ಬಂಗಾರವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.

ಸೌಂದರ್ಯವರ್ಧಕಗಳಲ್ಲಿ ಬಳಕೆ
ಈ ಮೀನನ್ನು ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ ಏಕೆಂದರೆ ಅದರ ಬಿಳಿ ಮಾಂಸವು ಮೃದು ಮತ್ತು ರುಚಿಕರವಾಗಿರುತ್ತದೆ. ಇದರ ಆಂತರಿಕ ಅಂಗಗಳಾದ ಹೃದಯ, ಹೊಟ್ಟೆಯ ಭಾಗ, ವಾಯು ಮೂತ್ರಕೋಶ (ಈಜು ಮೂತ್ರಕೋಶ) ಏಷ್ಯಾದ ದೇಶಗಳಲ್ಲಿ ಔಷಧೀಯ ಮತ್ತು ಸೌಂದರ್ಯವರ್ಧಕ ಮೌಲ್ಯಗಳನ್ನು ಹೊಂದಿರುವುದರಿಂದ ಇದಕ್ಕೆ ಹೆಚ್ಚಿನ ಮೌಲ್ಯವಿದೆ. 

ಅಂತೆಯೇ ಔಷಧೀಯ ಗುಣವನ್ನು ಹೊಂದಿರುವ ಈ ಮೀನಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಕರಾವಳಿಯ ಅಳಿವೆಯ ಆಳಕ್ಕೆ ಇರುವ ಮೀನು ಅರಬ್ಬೀ ಸಮುದ್ರದ ಶ್ರೀಲಂಕಾ, ಆಸ್ಟ್ರೇಲಿಯಾ ದವರೆಗೂ ಹಬ್ಬಿವೆ. 1.5 ಮೀಟರ್‌ ವರೆಗೆ ಉದ್ದ ಬೆಳೆಯುತ್ತದೆ. ಈ ಮೀನಿನ ತೂಕ ಹೆಚ್ಚಾದಂತೆ ದರವೂ ಹೆಚ್ಚಾಗುತ್ತದೆ. 30 ಕೆ.ಜಿ. ಮೀನು 5 ಲಕ್ಷ ರೂ. ವರೆಗೂ ಬೆಲೆಬಾಳುತ್ತದೆ. ಈ ಮೀನಿನ ಮಾಂಸ ಅತ್ಯಂತ ರುಚಿದಾಯಕವಷ್ಟೇ ಅಲ್ಲದೆ ಅದರ ವಾಯು ಚೀಲವನ್ನು ಸೌಂದರ್ಯ ವರ್ಧಕ ವಸ್ತುಗಳಲ್ಲಿ ಉಪಯೋಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರದ ಮೀನುಗಾರರು ಇದೇ ರೀತಿಯ 150 ಘೋಲ್ ಮೀನುಗಳನ್ನು ಬಲೆಗೆ ಬೀಳಿಸಿದ್ದಾರೆ. ಅಲ್ಲಿನ ಮೀನುಗಾರರು 1.33 ಕೋಟಿ ರೂಪಾಯಿಗಳನ್ನು ಗಳಿಸಿ ರಾತ್ರೋರಾತ್ರಿ ತಮ್ಮನ್ನು 'ಕೋಟ್ಯಾಧಿಪತಿ'ಗಳಾಗಿ ಮಾರ್ಪಡಿಸಿಕೊಂಡಿದ್ದರು.

SCROLL FOR NEXT