ರಾಜ್ಯ

ಹಿರಿಯ ವಿದ್ವಾಂಸ, ಲೇಖಕ ಪ್ರೊ. ಡಾ. ಕೆ.ಎಸ್. ನಾರಾಯಣಾಚಾರ್ಯ ನಿಧನ

Srinivas Rao BV

ಬೆಂಗಳೂರು: ನಾಡಿನ ಪ್ರಖ್ಯಾತ ವಿದ್ವಾಂಸ, ಲೇಖಕ, ಅಂಕಣಕಾರರಾಗಿದ್ದ ಪ್ರೊ. ಡಾ. ಕೆ.ಎಸ್ ನಾರಾಯಣಾಚಾರ್ಯ (88) ಅವರು ನ.26 ರಂದು ಮಧ್ಯರಾತ್ರಿ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 

ಹಿರಿಯ ವಿದ್ವಾಂಸರು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಎದುರಿಸುತ್ತಿದ್ದರು ಎಂದು ಆಪ್ತವರ್ಗಗಳು ತಿಳಿಸಿವೆ. 

1933 ರಲ್ಲಿ ಕನಕಪುರದ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದ್ದ ಪ್ರೊ.ಕೆ.ಎಸ್ ನಾರಾಯಣಾಚಾರ್ಯ ಮೈಸೂರು ವಿವಿಯಿಂದ ಬಿಎಸ್ ಸಿ (1954) ಬಿಎ (ಆನರ್ಸ್, 1957), ಎಂಎ (ಇಂಗ್ಲೀಷ್ 1958) ಪದವಿಯನ್ನು ಪಡೆದಿದ್ದರು. 

ಟಿ.ಎಸ್ ಎಲಿಯೇಟ್, ಡಬ್ಲ್ಯು. ಬಿ ಯೇಟ್ಸ್ ರ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರದ ಪ್ರಭಾವದ ವಿಷಯವಾಗಿ ಪ್ರಬಂಧ ಮಂಡಿಸಿದ್ದ ಇವರು 1959-61 ರಲ್ಲಿ ಪಿಎಚ್ ಡಿ ಪಡೆದಿದ್ದರು. ರಾಮಾಯಣಕ್ಕೆ ಸಂಬಂಧಿಸಿದ ಕೃತಿಗಳು ಹಾಗೂ ಪ್ರವಚನಗಳಿಂದ ಪ್ರಖ್ಯಾತಿ ಪಡೆದಿದ್ದ ಡಾ.ಕೆಎಸ್ ನಾರಾಯಣಾಚಾರ್ಯ ಅವರು ರಾಮಾಯಣಾಚಾರ್ಯ ಎಂದೇ ಖ್ಯಾತಿ ಗಳಿಸಿದ್ದರು. 

ಆಚಾರ್ಯ ಚಾಣಕ್ಯ, ರಾಮಾಯಣಸಹಶ್ರೀ, ವಾಲ್ಮೀಕಿ ಯಾರು? ಗಾಂಧೀಜಿಯನ್ನು ನಿಜವಾಗಿ ಕೊಂದವರು ಯಾರು? ಮುಂತಾದ ಕೃತಿಗಳನ್ನು ರಚಿಸಿದ್ದ ಡಾ.ಕೆಎಸ್ ನಾರಾಯಣಾಚಾರ್ಯ ರಾಷ್ಟ್ರೀಯತೆ-ಹಿಂದೂ ಧರ್ಮ, ಸಂಸ್ಕೃತಿಗಳ ಪ್ರಖರ ಪ್ರತಿಪಾದಕರಾಗಿದ್ದರು. 

ನಾರಾಯಣಾಚಾರ್ಯಅವರ ಅಗಲಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಂತಾಪ ಸೂಚಿಸಿದ್ದಾರೆ. "ಪ್ರಖ್ಯಾತ ವಿದ್ವಾಂಸರು ಹಾಗೂ ಅನೇಕ ಪೌರಾಣಿಕ ಕಾದಂಬರಿಗಳ ರಚನಾಕಾರರಾಗಿದ್ದ  ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ನಿಧನ ನೋವಿನ ಸಂಗತಿ. ಪ್ರವಚನ ಮತ್ತು ಕಾದಂಬರಿಕಾರರಾಗಿ ಅಪಾರ ಅಭಿಮಾನಿಗಳನ್ನು ಅವರು  ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಜೋಶಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

SCROLL FOR NEXT