ರಾಜ್ಯ

ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ: ಕಂಬಕ್ಕೆ ಕಟ್ಟಿಹಾಕಿ ಜೋಡಿಯ ಮೇಲೆ ಹಲ್ಲೆ

Manjula VN

ಮೈಸೂರು: ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಅನೈತಿಕ ಸಂಬಂಧ ಆರೋಪ ಮಾಡಿ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ನಡೆದಿದೆ.

ಮಹಿಳೆಯೊಬ್ಬರು ಪಕ್ಕದ ಊರಿನ ಯುವಕನೊಂದಿಗೆ ಮನೆಯಲ್ಲಿದ್ದಾಗ ಆಕೆಯ ಗಂಡ, ಮೈದುನ ಹಾಗೂ ಕೆಲ ಗ್ರಾಮಸ್ಥರು ರಾತ್ರಿ ವೇಳೆ ಮನೆಯ ಮೇಲೆ ದಾಳಿ ಮಾಡಿ ಕಂಬಕ್ಕೆ ಇಬ್ಬರನ್ನೂ ಕಟ್ಟಿಹಾಕಿ ಹಲ್ಲೆ ನಡೆಸಿದ್ದಲ್ಲದೆ ಗಡಿ ಯಜಮಾನರನ್ನು ಕರೆಸಿ ಕೂಟ ಸೇರಿಸಿ ನ್ಯಾಯಪಂಚಾಯತಿ ನಡೆಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ಕೆಲ ವರ್ಷಗಳ ಹಿಂದೆ ಮದುವೆಯಾಗಿ ಮೂರು ಮಕ್ಕಳ ತಾಯಿಯಾಗಿರುವ ಈಕೆ 5 ವರ್ಷಗಳಿಂದ ಗಂಡನಿಂದ ದೂರವಾಗಿ ಇದ್ದಾಳೆಂದು ಹೇಳಲಾಗಿದೆ. ಇಬ್ಬರು ಮಕ್ಕಳು ತಂದೆಯ ಜೊತೆಗೇ ಇದ್ದು, ಒಂದು ಮಾತ್ರ ತಾಯಿಯ ಆರೈಕೆಯಲ್ಲಿದೆ. ಮಹಿಳೆ ಮಡಿಕೇರಿಯ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಬುಧವಾರ ರಾತ್ರಿ ಮಡಿಕೇರಿ ಮೂಲಕ ವ್ಯಕ್ತಿಯೊಬ್ಬ ಮಹಿಳೆಯ ಮನೆಗೆ ಬಂದಿದ್ದು, ಈ ವಿಚಾರ ಆಕೆಯ ಪತಿಗೆ ತಿಳಿದಿದೆ. ಕೂಡಲೇ ತನ್ನ ಸಂಗಡಿಗರು ಹಾಗೂ ಸಂಬಂಧಿಕರೊಂದಿಗೆ ಬಂದಿರುವ ಆತ ಇಬ್ಬರನ್ನೂ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಗೋವಿಂದರಾಜು, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್ ತಳವಾರ್, ಕೌಲಂದೆ ಪಿಎಸ್ ಐ ಮಹೇಂದ್ರ ಸೇರಿದಂತೆ ಮತ್ತಿತರು ಗ್ರಾಮಕ್ಕೆ ಧಾವಿಸಿ ಇಬ್ಬರನ್ನೂ ಬಂಧನವನ್ನು ಮುಕ್ತಗೊಳಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಮಹಿಳೆಯ ಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

SCROLL FOR NEXT