ರಾಜ್ಯ

16 ತಿಂಗಳಾದರೂ ಆಸ್ಪತ್ರೆಯ ಶವಾಗಾರದಲ್ಲಿಯೇ ಇದ್ದ 2 ಕೋವಿಡ್ ಮೃತದೇಹಗಳು!

Manjula VN

ಬೆಂಗಳೂರು: ಬರೋಬ್ಬರಿ 16 ತಿಂಗಳುಗಳಾದರೂ ಕೋವಿಡ್ ಮೃತದೇಹಗಳು ಆಸ್ಪತ್ರೆಯ ಶವಾಗಾರದಲ್ಲಿಯೇ ಇದ್ದ ಘಟನೆಯೊಂದು ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ನಡೆದಿದೆ.

ಚಾಮರಾಜಪೇಟೆಯ ದುರ್ಗಾ (40) ಹಾಗೂ ಕೆಪಿ ಅಗ್ರಹಾರ ಮೂಲಕ ಮನಿರಾಜು (62) 2020ರ ಜುಲೈ ತಿಂಗಳಿನಲ್ಲಿ ಮೃತಪಟ್ಟಿದ್ದರು. ಮೃತದೇಹಗಳನ್ನು ಆಸ್ಪತ್ರೆಯ ಹಳೆಯ ಶವಾಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಕೊರೋನಾ 2ನೇ ಅಲೆ ವೇಳೆ ಸಾವಿನ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೊಸ ಶವಾಗಾರವನ್ನು ನಿರ್ಮಿಸಿ ಅಲ್ಲಿ ಶವಗಳನ್ನು ಸಾಗಿಸಲಾಗಿತ್ತು. ಆದರೆ, ಸಿಬ್ಬಂದಿಗಳ ನಿರ್ಲಕ್ಷ್ಯ ವರ್ತನೆಯಿಂದಾಗಿ ಹಳೆಯ ಶವಾಗಾರದಲ್ಲಿ ಈ ಎರಡೂ ಮೃತದೇಹಗಳು ಉಳಿದು ಹೋಗಿವೆ. ಶವಗಳನ್ನು ಇರಿಸಿ 16 ತಿಂಗಳುಗಳಾದರೂ ಯಾರೊಬ್ಬರ ಗಮನಕ್ಕೂ ಈ ವಿಚಾರ ಬಂದಿಲ್ಲ.

ಕಳೆದ ಶನಿವಾರ ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಶವಾಗಾರದ ಆವರಣ ಸ್ವಚ್ಛ ಮಾಡಲೆಂದು ಹೋದಾಗ ಸ್ಥಲದಲ್ಲಿ ದುರ್ವಾಸನೆ ಬರುವುದನ್ನು ಗಮನಿಸಿ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವೈದ್ಯಕೀಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಫ್ರೀಜರ್ ನಲ್ಲಿ ಎರಡು ಮೃತದೇಹಗಳಿರುವುದು ಕಂಡು ಬಂದಿದೆ. ನಂತರ ವೈದ್ಯಕೀಯ ಅಧೀಕ್ಷಕರು ಹಾಗೂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಎರಡೂ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯ ಅಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜಾಜಿನಗರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಇಮ್ತಿಹಾನ್ ಹುಸೇನ್ ಅವರು ಈ ಸಂಬಂಧ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

SCROLL FOR NEXT