ರಾಜ್ಯ

ಓಮಿಕ್ರಾನ್ ಆತಂಕದ ನಡುವೆಯೇ ಬೆಂಗಳೂರು ಮಕ್ಕಳಲ್ಲಿ 'ಸ್ಟಮಕ್ ಫ್ಲೂ' ಹೆಚ್ಚಳ!

Manjula VN

ಬೆಂಗಳೂರು: ಶಾಲೆಗಳು ಪುನರಾರಂಭಗೊಂಡ ಕೆಲವು ತಿಂಗಳುಗಳಲ್ಲೇ ನಗರದ ಮಕ್ಕಳಲ್ಲಿ 'ಸ್ಟಮಕ್ ಫ್ಲೂ' (ಹೊಟ್ಟೆ ಜ್ವರ) ಹೆಚ್ಚಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.

ಈ ಸ್ಟಮಕ್ ಫ್ಲೂವನ್ನೂ ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಎಂದೂ ಕರೆಯಲಾಗುತ್ತಿದೆ. ಪ್ರತೀನಿತ್ಯ ಈ ಸಮಸ್ಯೆಯಿಂದ 10-12 ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.

ಈ ಸ್ಟಮಕ್ ಫ್ಲೂ ಹೊಟ್ಟೆ ಮತ್ತು ಕರುಳಿನ ಮೇಲೆ ಪರಿಣಾಮ ಬೀರುತ್ತಿದ್ದು, ಇದರ ರೋಗಲಕ್ಷಣಗಳು ಸೌಮ್ಯ ಅಥವಾ ತೀವ್ರವಾಗಿರಲಿದೆ. ಹೊಟ್ಟೆಯ ಸೆಳೆತ, ಅತಿಸಾರ ಮತ್ತು ವಾಂತಿಯ ಲಕ್ಷಣವನ್ನೂ ಇದು ಒಳಗೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳಿದ್ದು, ಇದರಿಂದ ಕ್ಲಸ್ಟರ್ ಗಳೂ ಸಂಭವಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆಸ್ಟರ್ ಸಿಎಂಐ ಆಸ್ಪತ್ರೆಯ ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್‌ನ ಪ್ರಾಧ್ಯಾಪಕ ಮತ್ತು ಹಿರಿಯ ಸಲಹೆಗಾರ್ತಿ ಡಾ ಪರಿಮಳಾ ವಿ ತಿರುಮಲೇಶ್ ಅವರು ಮಾತನಾಡಿ, ನಗರದಲ್ಲಿ ಸ್ಟಮಕ್ ಫ್ಲೂ ಪ್ರಕರಣಗಳು ಹೆಚ್ಚಾಗುತ್ತಿದೆ. ಸಾಕಷ್ಟು ಮಕ್ಕಳು ಜ್ವರ ಮತ್ತು ವಾಂತಿಯಿಂದ ಬಳಲುತ್ತಿದ್ದಾರೆಂದು ಹೇಳಿದ್ದಾರೆ.

ಪ್ರತಿದಿನ, ವೈದ್ಯರು ಕನಿಷ್ಠ 12 ಮಂದಿ ವಿಭಿನ್ನ ಹಾಗೂ ತೀವ್ರ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, 1-8 ವರ್ಷಗಳ ಮಕ್ಕಳು ಹೆಚ್ಚಾಗಿ ಸ್ಟಮಕ್ ಫ್ಲೂವಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಚಳಿಗಾಲದಲ್ಲಿ ಬ್ಯಾಕ್ಟಿರಿಯಾ ಸೋಂಕುಗಳು ಸಾಮಾನ್ಯವಾಗಿರುತ್ತದೆ. ಮಳೆ ಹಾಗೂ ಅಲ್ಲಲ್ಲಿ ನೀರು ನಿಂತಿರುವುದು, ಶುದ್ಧ ನೀರಿನೊಂದಿಗೆ ಒಳಚರಂಡಿ ನೀರು ಮಿಶ್ರಣಗೊಳ್ಳುವುದು ಇದಕ್ಕೆ ಕಾರಣವಾಗಬಹುದು. ಅಪಾರ್ಟ್ ಮೆಂಟ್ ಗಳಲ್ಲಿನ ಮಕ್ಕಳು ಇಂತಹ ಸೋಂಕಿನಿಂದ ಹೆಚ್ಚಾಗಿ ಬಳಲುತ್ತಿರುವುದು ಕಂಡು ಬರುತ್ತಿದೆ. ಮಳೆಗಾಲದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯ ಎಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗಳ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಸಲಹೆಗಾರ ಡಾ.ಶ್ರೀಕಾಂತ್ ಕೆ.ಪಿ ಅವರು ಹೇಳಿದ್ದಾರೆ.

ಬಹುತೇಕ ಮಕ್ಕಳು 3-5 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಕೆಲ ಮಕ್ಕಳು ಗುಣಮುಖರಾಗಲು ಸಾಕಷ್ಟು ಸಮಯ ಬೇಕಾಗುತ್ತಿದೆ. ಕೆಲ ಮಕ್ಕಳು ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗುತ್ತಿದೆ. ಕೆಲ ಮಕ್ಕಳ ಮಲದಲ್ಲಿ ರಕ್ತ ಬೀಳುತ್ತಿರುವುದು ಕಂಡು ಬರುತ್ತಿದೆ. ಕೆಲ ಮಕ್ಕಳ ಕರುಳಿನಲ್ಲಿ ದೀರ್ಘಕಾಲದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಎಂದು ಸ್ಟಮಕ್ ಫ್ಲೂ ಕುರಿತು ವೈದ್ಯರು ವಿವರಿಸಿದ್ದಾರೆ.

SCROLL FOR NEXT