ರಾಜ್ಯ

ವೇತನ ನೀಡುವಂತೆ ಆಗ್ರಹಿಸಿ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

Manjula VN

ಬೆಂಗಳೂರು: ಅಕ್ಟೋಬರ್‌ ತಿಂಗಳ ವೇತನ ಪಾವತಿ ಮಾಡಿಲ್ಲ ಎಂದು ಆರೋಪಿಸಿ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಕಾರ್ಮಿಕರಿಗೆ ತಕ್ಷಣ ಎರಡು ತಿಂಗಳ ವೇತನ ಪಾವತಿ ಮಾಡಬೇಕು ಮತ್ತು ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನವನ್ನು ನೀಡಬೇಕು ಎಂಬ ಹಕ್ಕೋತ್ತಾಯದೊಂದಿಗೆ ಬಿಎಂಸಿಆರ್‌ಐ (ವಿಕ್ಟೋರಿಯಾ ಆಸ್ಪತ್ರೆ) ಆಡಳಿತ ಮಂಡಳಿಯ ವಿರುದ್ಧ ಎಐಸಿಸಿಟಿಯು ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕಾರ್ಮಿಕ ಕಾನೂನುಗಳ ಅನ್ವಯ ಪ್ರತಿ ತಿಂಗಳು 7ನೇ ತಾರೀಖಿನೊಳಗೆ ವೇತವನ್ನು ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ. ಆದರೆ ವಿಕ್ಟೋರಿಯಾ ಆಸ್ಪತ್ರೆಯ ಆಡಳಿತ ಮಂಡಳಿಯಾದ ಬಿಎಂಸಿಆರ್‌ಐ ಈ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ನೀಡದೆ ಕಾನೂನುಗಳನ್ನು ಗಾಳಿಗೆ ತೂರಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಿಕ್ಟೋರಿಯಾ ಆಸ್ಪತ್ರೆಯ ಆಡಳಿತ ಮಂಡಳಿಯಾದ ಬಿಎಂಸಿಆರ್‌ಐ ಈ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ನೀಡದೆ ಇರುವ ಕಾರಣ, ಮನೆ ಬಾಡಿಗೆ, ಊಟ-ಬಟ್ಟೆ, ಅನಾರೋಗ್ಯಕ್ಕೆ ಚಿಕಿತ್ಸೆ ಮತ್ತು ಮಕ್ಕಳ ಸ್ಕೂಲ್ ಫೀ ಸೇರಿದಂತೆ ಇತರೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈ ಕಾರ್ಮಿಕರು ಬಡ್ಡಿ ಸಾಲದ ಸುಳಿಯಲ್ಲಿ ಸಿಲುಕಬೇಕಾಗಿದೆ. ದಿನನಿತ್ಯದ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುತ್ತೀರುವ ಈ ಸಂಧರ್ಭದಲ್ಲಿ ಬಿಎಂಸಿಆರ್‌ಐ ಆಡಳಿತ ಮಂಡಳಿಯು ಕಾರ್ಮಿಕರಿಗೆ ವೇತನ ನೀಡದೆ ದುಡಿಸಿಕೊಳ್ಳುತ್ತಿರುವುದರಿಂದ ಕಾರ್ಮಿಕರು ಬೀದಿಪಾಲಾಗುವ ಸಂಭವವಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಸಿಸಿಟಿಯು ಆಕ್ರೋಶ ವ್ಯಕ್ತಪಡಿಸಿತು.

SCROLL FOR NEXT